ದಾಂಡೇಲಿ : ನಗರಸಭೆಯ ನೇತೃತ್ವದಲ್ಲಿ, ಪೊಲೀಸ್ ಇಲಾಖೆಯ ಸಹಕಾರ ಹಾಗೂ ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ನಗರದಲ್ಲಿ ಅನ್ಯ ಭಾಷೆಯ ನಾಮಫಲಕಗಳ ತೆರವಿಗೆ ಮಂಗಳವಾರ ಚಾಲನೆಯನ್ನು ನೀಡಲಾಗಿದೆ.
ನಗರದ ಜೆ.ಎನ್.ರಸ್ತೆಯಿಂದ ಅನ್ಯ ಭಾಷೆಯ ನಾಮಫಲಕ ತೆರವು ಕಾರ್ಯವನ್ನು ಆರಂಭಿಸಲಾಯಿತು. ಅನ್ಯ ಭಾಷೆಯಲ್ಲಿ ಬರೆದಿರುವ ನಾಮಫಲಕಗಳನ್ನು ತೆರವುಗೊಳಿಸಲು ಆರಂಭಿಸಿ, ಉಳಿದಂತೆ ಮಿಕ್ಕುಳಿದ ಅಂಗಡಿ ಮುಗ್ಗಟ್ಟುಗಳ ಕನ್ನಡ ಭಾಷೆಯಲ್ಲಿ ಅಲ್ಪಸ್ವಲ್ಪವಿರುವ ನಾಮಫಲಕಗಳ ತೆರವಿಗೆ ನಾಲ್ಕು ದಿನಗಳ ಗಡುವನ್ನು ನೀಡಲಾಯಿತು. ಅನ್ಯ ಭಾಷೆಯ ನಾಮಫಲಕವನ್ನು ತೆರವುಗೊಳಿಸುವಂತೆ ಕರವೇ ಕಾರ್ಯಕರ್ತರು ಹೇಳಿದಂತಹ ಸಂದರ್ಭದಲ್ಲಿ ಕೆಲವೆಡೆ ಅಂಗಡಿ ವ್ಯಾಪಾರಸ್ಥರು ಮತ್ತು ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆದ ಘಟನೆಯು ನಡೆಯಿತು.
ಅನ್ಯ ಭಾಷೆಯ ನಾಮಫಲಕ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ನಗರಸಭೆಯ ವ್ಯವಸ್ಥಾಪಕರಾದ ಪರಶುರಾಮ್ ಶಿಂಧೆ, ಆರೋಗ್ಯ ಅಭಿಯಂತರರಾದ ಶುಭಂ ರಾಯ್ಕರ್, ಆರೋಗ್ಯ ನಿರೀಕ್ಷಕ ವಿಲಾಸ್ ದೇವಕರ್, ಪಿಎಸ್ಐ ಐ.ಆರ್.ಗಡ್ಡೇಕರ್, ಕರ್ನಾಟಕ ರಕ್ಷಣಾ ವೇದಿಕೆ (ನಾ) ಬಣದ ತಾಲ್ಲೂಕು ಘಟಕದ ಅಧ್ಯಕ್ಷ ಸಾಧಿಕ್ ಮುಲ್ಲಾ, ಕರವೇ ಮಹಿಳಾ ಘಟಕದ ಅಧ್ಯಕ್ಷೆ ಮುಜೀಬಾ ಛಬ್ಬಿ, ನಗರ ಸಭೆಯ ಸಿಬ್ಬಂದಿಗಳು, ಪೌರಕಾರ್ಮಿಕರು, ಪೊಲೀಸ್ ಸಿಬ್ಬಂದಿಗಳು, ಕರವೇ (ನಾ)ಬಣದ ಕಾರ್ಯಕರ್ತರು ಉಪಸ್ಥಿತರಿದ್ದರು.