ಜೋಯಿಡಾ : ಮುಂದಿನ ದಿನಗಳಲ್ಲಿ ಅಂಚೆ ಕಚೇರಿಗಳಲ್ಲಿಯೂ ಕೂಡ ಸಾರ್ವಜನಿಕರಿಗೆ ಸಾಲ ಸೌಲಭ್ಯದ ಸೇವೆ ಸಿಗಲಿದೆ ಎಂದು ಶಿರಸಿ ವಿಭಾಗದ ಅಂಚೆ ಅಧೀಕ್ಷಕರಾದ ಹೂವಪ್ಪ.ಜಿ ಹೇಳಿದರು.
ಅವರು ಶನಿವಾರ ತಾಲ್ಲೂಕಿನ ರಾಮನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಅಂಚೆ ಜನಸಂಪರ್ಕ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಅಂಚೆ ಕಚೇರಿಯಲ್ಲಿ ಬ್ಯಾಂಕ್‌ಗಳ ಮಾದರಿಯಲ್ಲಿ ಉಳಿತಾಯ ಖಾತೆ ಸೇರಿದಂತೆ ಎಲ್ಲ ರೀತಿಯ ವ್ಯವಹಾರಗಳನ್ನು ಮಾಡಬಹುದು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಬಿಜಿವಿಎಸ್ ಪದವಿ ಕಾಲೇಜಿನ ಪ್ರಾಚಾರ್ಯ ಅನಿಲ್ ಕುಮಾರ್. ಕೆ .ದೇವರ್ಶಿ ಅವರು ಅಂಚೆ ಇಲಾಖೆಯ ಪ್ರಯೋಜನಕಾರಿ ಯೋಜನೆಗಳ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಿವಾಜಿ.ಕೆ.ಗೋಸಾವಿ ಅವರು ಅಂಚು ಇಲಾಖೆಯಡಿ ಜಾರಿಯಲ್ಲಿರುವ ಎಲ್ಲ ಸಾರ್ವಜನಿಕ ಸೇವೆಗಳಿಗೆ ಸದಾ ಸಹಕಾರ ನೀಡುವುದಾಗಿ ಹೇಳಿದರು.
ಅಧ್ಯಕ್ಷತೆಯನ್ನು ಅಂಚೆಪಾಲಕರಾದ ಶಿವಪ್ರಕಾಶ್ ಹಳ್ಳೆಪ್ಪನವರ ವಹಿಸಿದ್ದರು. ಅಂಚೆ ನಿರೀಕ್ಷಕರಾದ ಶಿವಾನಂದ ದೊಡ್ಡಮನಿ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಹಾಸ ಬಾಂದೇಕರ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.