ಅಂಕೋಲಾ: ಇಲ್ಲಿನ ಪುರಸಭೆಯ ಎರಡು ವಾರ್ಡುಗಳಿಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ತಲಾ ಒಂದೊಂದು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪುರಸಭೆಯ ವಾರ್ಡ್ ನಂ 15 ಪಳ್ಳಿಕೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಜನೀನ್ ಮನ್ಸೂರ್ ಸೈಯದ್ ಜಯಗಳಿಸಿದ್ಧಾರೆ.
ವಾರ್ಡಿನಲ್ಲಿ ಚಲಾವಣೆಯಾದ 709 ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಜನೀನ್ 290 ಮತಗಳನ್ನು ಪಡೆದುಕೊಂಡಿದ್ದು ಅವರ ಸಮೀಪದ ಪ್ರತಿಸ್ಪರ್ಧಿ ಭಾರತೀಯ ಜನತಾ ಪಕ್ಷದ ಜೈರಾಬಿ ಬೇಂಗ್ರೆ 225 ಮತಗಳನ್ನು ಪಡೆದುಕೊಂಡರು ಇಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಶಾಂತಿ ಯಾನೆ ಕವಿತಾ ಗಣಪತಿ ನಾಯ್ಕ 191 ಮತಗಳನ್ನು ಪಡೆದರೆ 3 ಮತಗಳು ನೋಟಾಕ್ಕೆ ಚಲಾಯಿಸಲ್ಪಟ್ಟಿವೆ.
ಅತ್ಯಂತ ಕುತೂಹಲ ಕೆರಳಿಸಿದ್ದ ವಾರ್ಡ್ ನಂಬರ್ 16 ಗುಡಿಗಾರ ಗಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ನಾಯ್ಕ ಜಯಗಳಿಸಿದ್ಧಾರೆ.
ಇಲ್ಲಿ ಚಲಾಯಿಸಲ್ಪಟ್ಟ 569 ಮತಗಳಲ್ಲಿ ಬಿಜೆಪಿಯ ವಿಶ್ವನಾಥ ನಾಯ್ಕ 276 ಮತಗಳನ್ನು ಪಡೆದರೆ ಅವರ ಸಮೀಪದ ಪ್ರತಿಸ್ಪರ್ದಿ ಪಕ್ಷೇತರ ಅಭ್ಯರ್ಥಿ ಪ್ರಕಾಶ ಶಾಂತಾರಾಮ ನಾಯ್ಕ 153 ಮತಗಳನ್ನು ಪಡೆದುಕೊಂಡಿದ್ದು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗಿಳಿದ ಉಮೇಶ ಗೋವಿಂದ ನಾಯ್ಕ 137 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದಾರೆ. ಈ ವಾರ್ಡಿನಲ್ಲಿ ಸಹ 3 ನೋಟಾ ಮತಗಳು ಚಲಾಯಿಸಲ್ಪಟ್ಟಿವೆ. ಈ ಫಲಿತಾಂಶದಿಂದಾಗಿ ಇದೀಗ 23 ಸದಸ್ಯರ ಸಂಖ್ಯಾ ಬಲ ಇರುವ ಅಂಕೋಲಾ ಪುರಸಭೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ತಲಾ 9 ಸದಸ್ಯರ ಬಲವನ್ನು ಹೊಂದಿದಂತಾಗಿದ್ದು ಮುಂದೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಲ್ಲಿ 5 ಜನ ಪಕ್ಷೇತರ ಸದಸ್ಯರು ನಿರ್ಣಾಯಕರಾಗಲಿದ್ದಾರೆ.
ವಿಜಯೋತ್ಸವ:
ಪುರಸಭೆ ವಾರ್ಡ್ ನಂಬರ್ 16 ಗುಡಿಗಾರಗಲ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವನಾಥ ನಾಯ್ಕ ಅವರು ಗೆಲುವು ಸಾಧಿಸಿರುವುದನ್ನು ಬಿಜೆಪಿ ಕಾರ್ಯಕರ್ತರು ಜೈಹಿಂದ್ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಭಾರತೀಯ ಜನತಾ ಪಕ್ಷ ಮತ್ತು ನರೇಂದ್ರ ಮೋದಿ ಅವರಿಗೆ ಜಯಕಾರ ಕೂಗಿದ ಬಿಜೆಪಿ ಕಾರ್ಯಕರ್ತರು ವಿಶ್ವನಾಥ ನಾಯ್ಕ ಅವರಿಗೆ ಹೂವಿನ ಹಾರ ಹಾಕಿ ಅಭಿನಂದನೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ವಿಶ್ವನಾಥ ಅವರು ಗೆಲುವು ಸಾಧಿಸುವ ಮೂಲಕ ಅಂಕೋಲಾ ಪಟ್ಟಣದ ಬಿಜೆಪಿ ಮತ್ತಷ್ಟು ಬಲಗೊಂಡಿದೆ ಎಂದರು. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಅಂಕೋಲಾ ಪಟ್ಟಣದಲ್ಲಿ ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯಗಳಿಗೆ ಮಹತ್ವ ನೀಡಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ
ಬಿಜೆಪಿಯ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜನರು ಪಕ್ಷದ ಅಭ್ಯರ್ಥಿಗೆ ಭಾರೀ ಅಂತರದಲ್ಲಿ ಗೆಲ್ಲಿಸಿದ್ದಾರೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ,ಪ್ರಮುಖರುಗಳಾದ ಚಂದ್ರಕಾಂತ ನಾಯ್ಕ, ದಾಮೋದರ ರಾಯ್ಕರ್, ಸೂರಜ ನಾಯ್ಕ, ಶ್ರೀಧರ ನಾಯ್ಕ ಉಪಸ್ಥಿತರಿದ್ದರು.
ಈ ಚುನಾವಣೆಯಲ್ಲಿ ತೆರೆಯ ಮರೆಯಲ್ಲಿಯೇ ಹಲವರ ಮೇಲಾಟ ನಡೆದು ಎರಡು ವಾರ್ಡಗಳಲ್ಲಿಯು ಕಸರತ್ತು ನಡೆದಿತ್ತು. ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ದಿಸಿದ 2 ವ್ಯಕ್ತಿಗಳು ಹೆಚ್ಚಿನ ಮತವನ್ನು ಪಡೆದಿದ್ದು ಅವರವರಲ್ಲಿ ಇರುವ ಮುಸುಕಿನ ಗುದ್ದಾಟ ಈ ಚುನಾವಣೆಯಲ್ಲಿ ಕೆಲಸ ಮಾಡಿದೆ ಎನ್ನುತ್ತಾರೆ ಪ್ರಜ್ಞಾವಂತರು.