ದಾಂಡೇಲಿ : ನಗರದಲ್ಲಿ ಕರ್ನಾಟಕ ಬ್ಯಾಂಕಿನ ಶಾಖೆಯಲ್ಲಿ ಬ್ಯಾಂಕ್ ಶಾಖೆಯ 57ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರದ ಹಿರಿಯ ಮುಖಂಡರು ಹಾಗೂ ಸಾಮಾಜಿಕ ಹೋರಾಟಗಾರರಾದ ವಾಸುದೇವ ಪ್ರಭು, ಕರ್ನಾಟಕ ಬ್ಯಾಂಕ್ ನಮ್ಮ ಕರುನಾಡಿನ ಹೆಮ್ಮೆಯ ಬ್ಯಾಂಕ್. ದಾಂಡೇಲಿಯಲ್ಲಿ ಬ್ಯಾಂಕ್ ಆರಂಭವಾದಾಗಿನಿಂದ ಈವರೆಗೂ ಅತ್ಯುತ್ತಮ ಸೇವೆಯನ್ನು ನೀಡುವ ಮೂಲಕ ಗ್ರಾಹಕರ ಮನ ಗೆದ್ದಿದೆ. ಕನ್ನಡ ನಾಡಿನ ಗೌರವಯುತವಾದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕರ್ನಾಟಕ ಬ್ಯಾಂಕಿನ ಶಾಖೆಗಳಲ್ಲಿ ನಾವು ನೋಡಬಹುದು. ಶಿಸ್ತುಬದ್ಧವಾದ ವ್ಯವಹಾರ, ಗ್ರಾಹಕರೊಂದಿಗೆ ಸಮನ್ವಯತೆ, ಬ್ಯಾಂಕಿನಲ್ಲಿರುವ ಕೌಟುಂಬಿಕ ವಾತಾವರಣದಿಂದಾಗಿ ಇಂದು ಬ್ಯಾಂಕ್ ಯಶಸ್ವಿಯಾಗಿ 57ನೇ ವಾರ್ಷಿಕೋತ್ಸವವನ್ನು ಹಮ್ಮಿಕೊಳ್ಳುವಂತಾಗಿದೆ ಎಂದರು.
ಬ್ಯಾಂಕ್ ಕಟ್ಟಡದ ಮಾಲಕರಾಗಿರುವ ಮಧುಕೇಶ್ವರ ಹಿರೇಮಠ ಅವರು ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿ ಮಾತನಾಡಿದರು. ಕರ್ನಾಟಕ ಬ್ಯಾಂಕಿನ ವಲಯ ಮುಖ್ಯಸ್ಥರಾದ ಶ್ರೀಶ ಕರ್ನಾಟಕ ಬ್ಯಾಂಕ್ ಬೆಳೆದು ಬಂದ ಹಾದಿಯನ್ನು ವಿವರಿಸಿ, ದಾಂಡೇಲಿಯ ಬ್ಯಾಂಕ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.ಶಾಖೆಯ ವ್ಯವಸ್ಥಾಪಕರಾದ ರಾಜು ಕೊಪ್ಪರ್ ಅವರು ಬ್ಯಾಂಕಿನ ಉನ್ನತಿಗೆ ದಾಂಡೇಲಿಯ ಜನತೆ ನೀಡುತ್ತಿರುವ ಸಹಕಾರವನ್ನು ಸ್ಮರಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬ್ಯಾಂಕಿನ ಅಧಿಕಾರಿಗಳಾದ ಪ್ರಶಾಂತ್ ಮಯ್ಯ ವಂದಿಸಿದರು. ಜೈರಾಮ್ ಪ್ರಭು ಕಾರ್ಯಕ್ರಮವನ್ನು ನಿರೂಪಿಸಿದರು. ಬ್ಯಾಂಕಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಾದ ಮನೋಜ್ ಪಂಡಿತ್, ಕ್ಷೇವಿಯರ್, ಶೀಜಾ, ಕಲಾವತಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರು ಹಾಗೂ ನಗರದ ಗಣ್ಯರು ಉಪಸ್ಥಿತರಿದ್ದರು.