ಸಿದ್ದಾಪುರ: ಸ್ಥಳೀಯ ಬಾಲಿಕೊಪ್ಪದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 6ನೇ ವರ್ಷದ ಜಾತ್ರೋತ್ಸವ ಜ.10ರಿಂದ 15ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಅಧ್ಯಕ್ಷ ಡಾ. ಕೆ.ಶ್ರೀಧರ ವೈದ್ಯ ಹೇಳಿದರು.
ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜ.10ರಂದು ಧ್ವಜಾರೋಹಣ, ಸುದರ್ಶನ ಹವನ, ಸಾಯಂಕಾಲ ಪಡಿಪೂಜೆ, ಜ.11ರಂದು ರುದ್ರಹವನ, ಆಶ್ಲೇಷಬಲಿ, ಜ.12ರಂದು ದುರ್ಗಾಹವನ, ಸತ್ಯನಾರಾಯಣ ಕಥೆ, ದೇವಸ್ಥಾನದ ತಂತ್ರಿಯವರಾದ ಬ್ರಹ್ಮಶ್ರೀ ತರನನಲ್ಲೂರು ಪದ್ಮನಾಭನ್ ಉಣ್ಣೆ ನಂಬೂದರಿ ಇವರಿಂದ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ಜ.13ರಂದು ಸಾರ್ವತ್ರಿಕ ಗಣಹೋಮ, ಅನ್ನಸಂತರ್ಪಣೆ, ಜ.14ರಂದು ಅಷ್ಟಾಭಿಷೇಕ, ರಾಣೆಬೆನ್ನೂರಿನ ಶ್ರೀ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಶ್ರೀ ಪ್ರಕಾಶನಂದಜಿ ಮಹಾರಾಜ್ ಅವರಿಂದ ಆಶೀರ್ವಚನ ನಂತರ ಅವರಿಂದ ಅಂಬಾರಿಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಮೆರವಣಿಗೆಗೆ ಚಾಲನೆ ನಡೆಯಲಿದೆ. ಜ.15ರಂದು ಓಕಳಿ, ಧ್ವಜ ಅವರೋಹಣ ಜರುಗಲಿದೆ.ಪ್ರತಿ ನಿತ್ಯ ಬೆಳಗ್ಗೆ ವಿಶೇಷ ಪೂಜೆ ಹಾಗೂ ಸಂಜೆ 6.30ರಿಂದ ಸ್ವಾಮಿಯ ಉತ್ಸವ ನಡೆಯಲಿದೆ.
ನಿತ್ಯ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು ಅವರಿಂದ ಭಜನೆ, ರಸಮಂಜರಿ, ಯಕ್ಷಗಾನ ಮತ್ತಿತರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಜಾತ್ರಾ ಸಮಿತಿಯ ಅಧ್ಯಕ್ಷ ಕೆ.ಜಿ.ನಾಗರಾಜ ಮಾತನಾಡಿ ಜಾತ್ರಾ ಉತ್ಸವದ ಅಯ್ಯಪ್ಪ ಸ್ವಾಮಿ ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಳ್ಳಲಿದೆ ಎಂದು ಹೇಳಿದರು.ಸದಾನಂದ ಕಾಮತ್, ಎ.ಆರ್.ನಾಯ್ಕ, ಅಮಿತ್, ರಾಘವೇಂದ್ರ ಇತರರಿದ್ದರು.