ಸಿದ್ದಾಪುರ: ಅಂಧರಿಗೆ ವಿಶೇಷ ದೃಷ್ಟಿ ಉಪಕರಣ ನೀಡಿದ್ದರಿಂದ ಜಗತ್ತನ್ನು ನೋಡುವ ದಿವ್ಯ ದೃಷ್ಟಿ ಕೊಟ್ಟಂತಾಗಿದೆ ಎಂದು ಮಲ್ಟಿಪಲ್ ಚೆರಮನ್ ಲಯನ್ ಬಿ.ಎಸ್.ರಾಜಶೇಖರಯ್ಯ ಹೇಳಿದರು.
ಪಟ್ಟಣದ ಜಗದ್ಗುರು ಮುರುಘ ರಾಜೇಂದ್ರ ಅಂಧ ಮಕ್ಕಳ ಶಾಲೆಯಲ್ಲಿ ಆಶಾಕಿರಣ ಟ್ರಸ್ಟ್,ಲಯನ್ಸ್ ಕ್ಲಬ್ ಸಿದ್ದಾಪುರ ಹಾಗೂ ಲಯನ್ಸ್ ವೃತ್ತಿಪರ ತರಬೇತಿ ಕೇಂದ್ರ ಆಯೋಜಿಸಿದ್ದ ಅಂಧರಿಗೆ ವಿಶೇಷ ದೃಷ್ಟಿ ಉಪಕರಣ ಲೋಕಾರ್ಪಣೆ ಮತ್ತು ಮಹಿಳೆಯರಿಗೆ ವೃತಿ ತರಬೇತಿ ನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಗುರುವಾರ ಮಾತನಾಡಿದರು. ದೈಹಿಕ ತೊಂದರೆ ಇರುವ ವ್ಯಕ್ತಿಗಳಿಗೆ ಲಯನ್ಸ್ ಸಂಸ್ಥೆ ಬಹು ದೊಡ್ಡ ಸೇವೆ ಸಲ್ಲಿಸುತ್ತಿದೆ. ಇದು ಅನುಕರಣೀಯ. ಸಿದ್ದಾಪುರದ ಆಶಾಕಿರಣ ಟ್ರಸ್ಟ್ ಅಂಧರ ಸೇವೆಯಲ್ಲಿ ಕ್ರಾಂತಿಯನ್ನೇ ಮಾಡಿದೆ ಎಂದು ಶ್ಲಾಘಿಸಿದರು.
ಅಧ್ಯಕ್ಷತೆ ವಹಿಸಿದ ಡಾ. ರವಿ ಹೆಗಡೆ ಹೂವಿನಮನೆ ಮಾತನಾಡಿ ಜಗದ್ಗುರು ಮುರುಘ ರಾಜೇಂದ್ರ ಅಂಧ ಮಕ್ಕಳ ಶಾಲೆಯಲ್ಲಿ ನಡೆಸುತ್ತಿರುವ ಚಟುವಟಿಕೆಗಳು ರಾಜ್ಯದಲ್ಲೇ ವಿಶಿಷ್ಟವಾಗಿದೆ. ಅಂಧರಿಗೆ ವಿಶೇಷ ದೃಷ್ಟಿ ಉಪಕರಣ ನೀಡಿರುವುದು ಅಂಧರ ಬದುಕಿಗೆ ಭರವಸೆ ಕೊಟ್ಟಂತಾಗಿದೆ ಎಂದರು.
ರೀಜನ್ ಚೇರ್ ಪರ್ಸನ್ ಲಯನ್ ಐಶ್ವರ್ಯ ಮಾಸೂರಕರ್, ಜೋನ್ ಚೇರ್ ಪರ್ಸನ್ ವಿನಯಾ ಹೆಗಡೆ, ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷ ಆರ್. ಎಂ.ಪಾಟೀಲ್ ಉಪಸ್ಥಿತರಿದ್ದರು. ಲಯನ್ ಶಾಮಲಾ ಹೆಗಡೆ ಹೂವಿನಮನೆ ಮಹಿಳೆಯರಿಗೆ ವೃತ್ತಿ ಪರ ತರಬೇತಿ ಕುರಿತು ವಿವರ ನೀಡಿದರು. ಆಶಾಕಿರಣ ಟ್ರಸ್ಟ್ನ ಉಪಾಧ್ಯಕ್ಷ ಸಿ.ಎಸ್.ಗೌಡರ ಪ್ರಾಸ್ತಾವಿಕ ಮಾತನಾಡಿದರು. ನಾಗರಾಜ ದೋಶೆಟ್ಟಿ, ಕುಮಾರ್ ಗೌಡರ್, ಪ್ರೇಮಾ ರಾಜಶೇಖರಯ್ಯ, ಇತರರಿದ್ದರು. ಇದೇ ಸಂದರ್ಭದಲ್ಲಿ ಶಿರಸಿಯ ಪೂಜಾ ದೇಶಪಾಂಡೆ ಮಹಿಳೆಯರಿಗೆ ಕುಂಕುಮ ತಯಾರಿಕಾ ವಿಧಾನ ಮತ್ತು ಸರಳ ಜೀವನ ವಿಧಾನದ ತರಬೇತಿ ನಡೆಸಿ ಕೊಟ್ಟರು.