ದಾಂಡೇಲಿ : 138 ವರ್ಷಗಳ ಭವ್ಯ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಈ ದೇಶದ ಅಭಿವೃದ್ಧಿಗೆ ಮಹತ್ವಪೂರ್ಣವಾದ ಕೊಡುಗೆಯನ್ನು ನೀಡಿದೆ. ಶಾಂತಿ, ಸೌಹಾರ್ದತೆಯ ರಾಷ್ಟ್ರ ನಿರ್ಮಾಣ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಎಲ್ಲರನ್ನು ಒಗ್ಗೂಡಿಸಿ, ಸರ್ವ ಸಮನ್ವತೆಯ ಸಮಾಜ ನಿರ್ಮಾಣದ ಜೊತೆಗೆ ದೇಶದ ಪ್ರಗತಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಪಕ್ಷದ ಪದಾಧಿಕಾರಿಗಳು, ಮುಖಂಡರು ನಿರಂತರವಾಗಿ ಜನರ ಸಮೀಪದಲ್ಲಿದ್ದಾಗ ಪಕ್ಷ ಸಂಘಟನೆ ಮತ್ತು ಪಕ್ಷ ಸದೃಢಗೊಳ್ಳಲು ಸಾಧ್ಯ ಎಂದು ಶಾಸಕರಾದ ಆರ್.ವಿ. ದೇಶಪಾಂಡೆ ಹೇಳಿದರು.
ಅವರು ಶುಕ್ರವಾರ ನಗರದ ಕಾರ್ಮಿಕ ಭವನದಲ್ಲಿ ಆಯೋಜಿಸಲಾಗಿದ್ದ ಹಳಿಯಾಳ-ದಾಂಡೇಲಿ- ಜೋಯಿಡಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷ ಸಂಘಟನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ಪಕ್ಷದ ಪದಾಧಿಕಾರಿಗಳು ಭಾಷಣಕ್ಕೆ ಮಾತ್ರ ಸೀಮಿತರಾಗಬಾರದು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪಕ್ಷದ ನೇತೃತ್ವದ ರಾಜ್ಯ ಸರಕಾರದ ಸಾಧನೆಗಳ ಬಗ್ಗೆ ಜನ ಮಾನಸಕ್ಕೆ ಮಾಹಿತಿಯನ್ನು ನಿರಂತರವಾಗಿ ನೀಡುತ್ತಿರಬೇಕು. ನಾವು ಬಂದಾಗ ನಮ್ಮ ಮುಂದೆ ನಿಂತು ಭಾಷಣ ಮಾಡಿದರೆ ಪಕ್ಷ ಬೆಳೆಯಲು ಸಾಧ್ಯವಿಲ್ಲ. ಜನತೆಯ ಮನಸ್ಸನ್ನು ಗೆಲ್ಲುವ ನಿಟ್ಟಿನಲ್ಲಿ ಪಕ್ಷದ ಪದಾಧಿಕಾರಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಪಕ್ಷ ಸಂಘಟನೆಗೆ ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಕರೆ ನೀಡಿದರು. ಕ್ಷೇತ್ರದಲ್ಲಿ ತಾನು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿದರೆ
ಮತ್ತು ಪಕ್ಷದ ಪದಾಧಿಕಾರಿಗಳು ಪಕ್ಷ ನಿಷ್ಠೆಯಿಂದ ಕೆಲಸವನ್ನು ಮಾಡಿರುತ್ತಿದ್ದಲ್ಲಿ ಪ್ರಚಂಡ ಮತಗಳ ಅಂತರದಿಂದ ಗೆಲುವು ಸಾಧ್ಯವಾಗಬಹುದಿತ್ತು. ಆದರೆ ಅಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿರುವುದು, ನನ್ನ ಸ್ವಾಭಿಮಾನಕ್ಕೂ ನೋವಾಗಿದೆ. ಇನ್ನಾದರೂ ಪದಾಧಿಕಾರಿಗಳು ಪಕ್ಷ ಸಂಘಟನೆಯ ಕಡೆಗೆ ಹೆಚ್ಚಿನ ಒತ್ತನ್ನು ನೀಡಬೇಕು. ಪಕ್ಷ ಸಂಘಟನೆಗೆ ತೊಡಗಿಕೊಳ್ಳದ ಪದಾಧಿಕಾರಿಗಳು ತನ್ನ ಜವಾಬ್ದಾರಿಯಿಂದ ನಿರ್ಗಮಿಸುವುದೇ ಒಳಿತು ಎಂದು ಅಭಿಪ್ರಾಯಸಿದರು. ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಹೇಳಿಕೊಳ್ಳುವಷ್ಟು ಇಲ್ಲ. ಚುನಾವಣೆಯ ಸಂದರ್ಭದಲ್ಲಿ ಪಕ್ಷ ಸಂಘಟನೆ ಮಾಡುವುದಲ್ಲ. ಪಕ್ಷ ಸಂಘಟನೆ ನಿರಂತರವಾದ ಪ್ರಕ್ರಿಯೆ. ನಾನು ಕೂಡ ಪಕ್ಷದ ಯುವ ಘಟಕದ ಸಾರಥ್ಯವನ್ನು ವಹಿಸಿ, ಬ್ಲಾಕ್ ಘಟಕದ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಪದವಿಯನ್ನು ನಿರ್ವಹಿಸಿ, ಪಕ್ಷಕ್ಕಾಗಿ ನಿರಂತರವಾಗಿ ದುಡಿದು ಇವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಕಾಂಗ್ರೆಸ್ ಪಕ್ಷದ ಸಾಧನೆ, ರಾಜ್ಯ ಸರ್ಕಾರದ ಸಾಧನೆಗಳನ್ನು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನ ಪಡಿಸಿರುವ ಬಗ್ಗೆ ಜನಮಾನಸಕ್ಕೆ ತಿಳಿಸುವ ಕೆಲಸವನ್ನು ಪಕ್ಷದ ಪದಾಧಿಕಾರಿಗಳಾದಿಯಾಗಿ ಕಾರ್ಯಕರ್ತರು ಮಾಡಬೇಕೆಂದು ಕರೆ ನೀಡಿದರು.
ಪಕ್ಷದ ಜಿಲ್ಲಾಧ್ಯಕ್ಷರಾದ ಸಾಯಿ ಗಾಂವಕರ್ ಮಾತನಾಡಿ ಕಾಂಗ್ರೆಸ್ ಪಕ್ಷ ಬಡವರ, ದೀನದಲಿತರ ಪಕ್ಷವಾಗಿದ್ದು ಸರ್ವರನ್ನು ಸಮಾನವಾಗಿ ನೋಡುವ ಸಮಗ್ರ ಅಭಿವೃದ್ಧಿಗಾಗಿ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಪಕ್ಷವಾಗಿದೆ ಎಂದರು.
ಈ ಸಂದರ್ಭದಲ್ಲಿ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣಾ ಪಾಟೀಲ್, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್.ಹೆಗಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ದೇಸಾಯಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಶೇಖ, ದಾಂಡೇಲಿಯ ಯುವ ಕಾಂಗ್ರೆಸ್ ಅಧ್ಯಕ್ಷ ಉಸ್ಮಾನ್ ಮುನ್ನ ವಹಾಬ್, ಹಳಿಯಾಳದ ಯುವ ಕಾಂಗ್ರೆಸ್ ಅಧ್ಯಕ್ಷರಾದ ರವಿ ತೋರಣಗಟ್ಟಿ, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ರೇಣುಕಾ ಬಂದಂ, ಪಕ್ಷದ ಪ್ರಮುಖರಾದ ಶೋಭಾ ವಿಠ್ಠಲ್ ರಾವಳ್, ದಾದಾಪೀರ್ ನದೀಮುಲ್ಲಾ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿದರು.
ವೇದಿಕೆಯಲ್ಲಿ ಪಕ್ಷದ ಮುಖಂಡರುಗಳಾದ ಟಿ.ಆರ್.ಚಂದ್ರಶೇಖರ್, ಸುಭಾಷ್ ಕೊರ್ವೇಕರ್, ಸದಾನಂದ ದಬಗಾರ, ಶಂಕರ ಬೆಳಗಾಂವಕರ್, ಕೃಷ್ಣ ದೇಸಾಯಿ, ಸರಸ್ವತಿ ರಜಪೂತ್, ಮಾಲಾ ಬ್ರಿಗಾಂಜಾ, ಸಂಜಯ್ ಹಣಬರ್, ಸಂತೋಷ್ ರೇಣುಕೆ, ನಿರ್ಮಲಾ ವಡ್ಡರ್, ಅರುಣ್ ಭಾಗವತಿರಾಜ್, ಎಚ್.ಬಿ.ಪರಶುರಾಮ, ಸಹದೇವ ಕಾಂಬಳೆ ಮೊದಲಾದವರು ಉಪಸ್ಥಿತರಿದ್ದರು.