Slide
Slide
Slide
previous arrow
next arrow

ಶಾಲೆ, ಅಂಗನವಾಡಿಗಳ ಅಭಿವೃದ್ಧಿಯೇ ನನ್ನ ಅವಧಿಯ ದೇವರ ಪೂಜೆಯಾಗಿದೆ: ಸಚಿವ ಮಂಕಾಳ ವೈದ್ಯ

300x250 AD

ಭಟ್ಕಳ: ತ್ರೈಮಾಸಿಕ ಕೆ.ಡಿ.ಪಿ. 20 ಅಂಶಗಳ ಪ್ರಗತಿ ಪರಿಶೀಲನಾ ಸಭೆಯು ಇಲ್ಲಿನ ಸಹಾಯಕ ಆಯುಕ್ತರ ಕಚೇರಿ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರದಂದು ಜರುಗಿತು.

ಸಭೆಯ ಆರಂಭದಲ್ಲಿ ಈ ಹಿಂದಿನ ಸಭೆಯ ನಡಾವಳಿಯನ್ನು ಮರು ನೆನಪಿಸಿದ ಸಚಿವ ವೈದ್ಯ ಅವರು ನಿಮ್ಮಿಂದ ಕೆಲಸ ಆಗಿದೆಯಾ ಇಲ್ಲವಾ ಎಂಬುದನ್ನು ಪರಿಶೀಲಿಸಲಿದ್ದೇನೆ. ಜನರ ಕೆಲಸ ಮಾಡದಿದ್ದಲ್ಲಿ ಜಿಲ್ಲೆಯ ಕೆಲಸದಿಂದ ಹೊರ ಹಾಕಲಿದ್ದೇನೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ಕಚೇರಿಯ ಸಮಯಕ್ಕೂ ಮೊದಲೆ ತೆರಳುತ್ತಾರೆಂದು ಕೆಲ‌ ಅಧಿಕಾರಿಗಳ ಬಗ್ಗೆ ದೂರುಗಳಿವೆ. ಜನರು ನಿಮ್ಮ ಬಗ್ಗೆ ದಾಖಲೆ‌ ಸಹಿತ ದೂರುಗಳು ನಮ್ಮ‌ ಬಳಿ ಬರುತ್ತಲಿವೆ ನೀವು ಯಾವ ಹಂತದಲ್ಲಿಯೂ ಸುಳ್ಳು ಹೇಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಇದು ಕೊನೆಯ ಎಚ್ಚರಿಕೆ ಎಂದು ಹೇಳಿದ ಅವರು ಉಸ್ತುವಾರಿ ಸಚಿವರೇ ಸಭೆಗೆ ಕರೆದರು ಸಮಯಕ್ಕೆ ಸರಿಯಾಗಿ ಬಾರಲು ಆಗದಿದ್ದ ಮೇಲೆ ಅಂತಹವರನ್ನು ಹೊರಗಡೆ ಇರಬೇಕು ಎಚ್ಚರಿಸಿದರು.

ನಂತರ ಇಲಾಖಾವಾರು ಪ್ರಗತಿ ಪರಿಶೀಲಿನಾ ಸಭೆಯನ್ನು ಸಚಿವ ವೈದ್ಯ ನಡೆಸಿದರು.

ಆರೋಗ್ಯ ಇಲಾಖೆ: 30-40 ಪ್ರತಿಶತ ಹೊನ್ನಾವರದ ಭಾಗದ ರೋಗಿಗಳಿದ್ದಾರೆ. ಇದರಿಂದ ಸಿಬ್ಬಂದಿಗಳ ಕೊರತೆ ಉಂಟಾಗಿದೆ. ಕೋವಿಡ್ ಸೋಂಕು ಜೋರಾಗುತ್ತಿದ್ದು ಸದ್ಯ ಕೆಲವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದರ ವರದಿ ಬರಲಿದ್ದು ಯಾವುದೇ ಸೋಂಕು ಬಾರದಿರಲಿ ಎಂಬ ಆಶಯ ವ್ಯಕ್ತಪಡಿಸಿದ ಅವರು ಕೋವಿಡ್ ನಿಯಂತ್ರಣಕ್ಕೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ. ಮೂರು ದಿನದ ಹಿಂದೆ ಕೋವಿಡ್ ಪರೀಕ್ಷೆ ಆರಂಭಿಸಿದ್ದೇವೆ. ಜನವರಿ 1 ರಿಂದ ಎಲ್ಲಾ ಇಲಾಖೆ ಅಧಿಕಾರಿಗಳು ಮಾಸ್ಕ್ ಕಡ್ಡಾಯ ಮಾಡಬೇಕು. ಡೆಂಗ್ಯೂ ಪ್ರಕರಣಗಳ ತಡೆಗು ಸಹ ಕ್ರಮ ತೆಗೆದುಕೊಂಡಿದ್ದೇವೆ.

ಬಂದರು, ಪಿಡಬ್ಲೂಡಿ ಮತ್ತು ಮೀನುಗಾರಿಕೆ ಇಲಾಖೆ ಜಂಟಿಯಾಗಿ ಶಾಶ್ವತ ಪರಿಹಾರಕ್ಕೆ ಸಚಿವ ವೈದ್ಯ ಸೂಚಿಸಿದರು. ಎಂಡೋಸಲ್ಪಾನ ಕೇಂದ್ರ ಮಂಕಿ ಅಥವಾ ಬೆಳಕೆ ಭಾಗದಲ್ಲಿ ಮಾಡಬೇಕಾಗಿದ್ದು ಅವರ ಕುಟುಂಬದವರು ಸಹ ವಸತಿ ಇರುವಂತೆ ವ್ಯವಸ್ಥೆಗೆ ಚಿಂತನೆ ನಡೆಸಿದ್ದೇನೆ ಎಂದು ಸಚಿವ ವೈದ್ಯ ತಿಳಿಸಿದರು.

ಪಶು ಇಲಾಖೆ : ಒಂದು ಆಕಳು ಸಾವಿನ ಬಳಿಕ ಇನ್ನೊಂದು ಆಕಳು ಖರೀದಿಗೆ ಸರಕಾರ 10 ಸಾವಿರ ಧನ ಸಹಾಯ ಮಾಡುತ್ತಿದೆ. ಈಗಾಗಲೇ ಇಲಾಖೆಯಿಂದ ಆಕಳು, ಹೋರಿ, ಎಮ್ಮೆ, ಕರು ಸಾವನ್ನಪ್ಪಿದರು ಸಹಾಯಧನ ನೀಡುತ್ತಲಿದ್ದೇವೆ. ಕುರಿ ಮತ್ತು ಆಡು ಸಾವಿಗೂ ಸರಕಾರದಿಂದ ಸಹಾಯಧನದ ಸೌಕರ್ಯವಿದೆ ಎಂದು ಪಶು ವೈದ್ಯ ಸಭೆಯಲ್ಲಿ ಮಾಹಿತಿ ನೀಡಿದರು. 1962 ದೂರವಾಣಿ ನಂಬರಗೆ ಕರೆ ಮಾಡಿದರೆ ಪಶು ಅಂಬ್ಯುಲೆನ್ಸ ಸೌಲಭ್ಯ ಪಡೆಯಲಿದ್ದು, ಸ್ಥಳಕ್ಕೆ ಹೋಗಿ ಪಶು ಪ್ರಾಣಿಗಳ ಆರೈಕೆ ಮಾಡಿ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದಲ್ಲಿ ಪಶು ಆಸ್ಪತ್ರೆಗೆ ಅಂಬುಲೆನ್ಸ ಮೂಲಕ ಕರೆ ತರುವ ವ್ಯವಸ್ಥೆ ಸರಕಾರ ಮಾಡಿದೆ ಎಂದ ಸಚಿವ ಮಂಕಾಳ ವೈದ್ಯ ಅಧೀಕೃತ ಗೋಶಾಲೆಗಳಿಗೆ ಪ್ರತಿ ಗೋವಿನ ಆರೈಕೆಯಂತೆ ಸರಕಾರದಿಂದ ಸಹಾಯಧನ ನೀಡುವ ಯೋಜನೆ ಇದೆ ಎಂದರು. ಇದೇ ವೇಳೆ ಪಶು ವೈದ್ಯರು ಇಲಾಖೆಯಲ್ಲಿ ಸಿಬ್ಬಂದಿಗಳ ಕೊರತೆಯ ಬಗ್ಗೆ ಸಚಿವರಲ್ಲಿ ಮನವಿ ಮಾಡಿದರು. ಹಾಗೂ ಜಾಲಿ ಮತ್ತು ಬೇಂಗ್ರೆಯಲ್ಲಿ ಆರೋಗ್ಯ ಕೇಂದ್ರಗಳನ್ನು ನಿರ್ಮಿಸಿಬೇಕೆಂಬ ಆಶಯವನ್ನು ಸಚಿವ ಮಂಕಾಳ ವೈದ್ಯ ಅವರು ತಿಳಿಸಿದರು.

ಕೃಷಿ ಇಲಾಖೆ: ಇಲಾಖೆಯ ಅಧಿಕಾರಿಗಳು ಮಾಡುವ ಸರ್ವೇ ಸಮೀಕ್ಷೆಯಲ್ಲಿ ಕೊರತೆ ಅಥವಾ ತಪ್ಪಾದಲ್ಲಿ ರೈತರಿಗೆ ಸಮಸ್ಯೆ ಆದಲ್ಲಿ ನೀವುಗಳೆ ಹೊಣೆಗಾರರು ಎಂದು ಸಚಿವ ವೈದ್ಯ ಎಚ್ಚರಿಸಿದರು. ಎರೆಹುಳು ಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು ಈ ಬಗ್ಗೆ ನಿಮ್ಮಲ್ಲಿಯೂ ಮನವಿ ಮಾಡಿದ್ದೇವೆ ಎಂದ ಅಧಿಕಾರಿಗೆ ರೈತರೇ ಕುದ್ದು ಎರೆಹುಳು ಗೊಬ್ಬರ ತಯಾರಿಸುವ ಬಗ್ಗೆ ಅವರಿಗೆ ಸಹಾಯ ಮಾಡಿ ಜೊತೆಗೆ ಸರಕಾರದಿಂದ ತರಿಸಿಕೊಳ್ಳುವ ಕೆಲಸ ಮಾಡಲಿದ್ದೇವೆ ಎಂದು ಸಚಿವರು ತಿಳಿಸಿದರು.

ಶಿಕ್ಷಣ ಇಲಾಖೆ: ತಾಲೂಕಿನಲ್ಲಿ 6700 ಮಕ್ಕಳ ಆಧಾರ ಸಿಡಿಂಗ್ ಆಗುತ್ತಿಲ್ಲ. ಈ ಬಗ್ಗೆ ಬೇರೆಯದೆ ಆಧಾರ ಸೀಡಿಂಗ್ ಮಾಡಲು ಕಿಟ್ ಗಳನ್ನು ಶಾಲೆಗೆ ಪೋಸ್ಟ ಆಫೀಸ್ ನಿಂದ ತರಿಸಿಕೊಟ್ಟಲ್ಲಿ ಅನೂಕೂಲ ಆಗಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಡಿ. ಮೊಗೆರ ಅವರು ಸಚಿವ ರಲ್ಲಿ ಮನವಿ ಮಾಡಿಕೊಂಡಿದರು. ಇನ್ನು ಭಟ್ಕಳದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆಯುವಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವಿಶೇಷ ಕಾರ್ಯಾಗಾರ ಮಾಡುತ್ತಲಿದ್ದೇವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹೇಳಿದರು. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳು ಒಬ್ಬರು ಸಹ ಫೇಲ್ ಆಗಬಾರದು‌. ಎಲ್ಲಾ ವ್ಯವಸ್ಥೆ ಶಿಕ್ಷಣಕ್ಕೆ ಮಾಡಿದ್ದೇನೆ. ನನಗೆ ಈಗ ವಿದ್ಯಾರ್ಥಿಗಳಿಂದ ಫಲಿತಾಂಶ ಬೇಕು ಎಂದು ಸಚಿವ ವೈದ್ಯ ಸೂಚಿಸಿದರು. ಅದರಂತೆ ಶಿಕ್ಷಣ ಇಲಾಖೆಯ ವಾಹನ ಗುಜರಿಗೆ ಬಂದಿದ್ದ ಹಿನ್ನೆಲೆ ಬೇರೆ ವ್ಯವಸ್ಥೆ ಕಲ್ಪಿಸುವ ತನಕ ತಾತ್ಕಾಲಿಕವಾಗಿ ಬೇರೆ ವಾಹನ ವ್ಯವಸ ಕಲ್ಪಿಸಲಿದ್ದೇವೆ ಎಂದು ಸಚಿವರು ತಿಳಿಸಿದರು.

ಹೆಸ್ಕಾಂ ಇಲಾಖೆ: ನನ್ನ ಹಿಂದಿನ ಅವಧಿಯಲ್ಲಿ 7000 ಮನೆಗೆ ವಿದ್ಯುತ್ ನೀಡಿದ್ದೇನೆ. ಕ್ಷೇತ್ರದಲ್ಲಿ ಒಟ್ಟು 26 ಐ.ಪಿ.ಸೆಟ್ ವಿತರಿಸಲಾಗಿದ್ದು ಎಲ್ಲವು ಉಚಿತ ನೀಡಿದ್ದೇವೆ. ರೈತರಿಗೆ ಒಂದು ಐ.ಪಿ.ಸೆಟ್ ಕೊಡಿಸುವ ಕೆಲಸಕ್ಕಿಂತ ಬೇರೆ ಯಾವ ಗುದ್ದಲಿ ಪೂಜೆ ಇದೆ ಎಂದ ಸಚಿವರು 17 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿಯೇ ರೈತರಿಗೆ ಐ.ಪಿ.ಸೆಟ್ ಉಚಿತ ನೀಡಿದ್ದೇವೆ. 2 ಕೋಟಿ ಭಟ್ಕಳದ ಜನರು ಗ್ರಹಜ್ಯೋತಿ ಹಣದ ಉಪಯೋಗ ಪಡೆದುಕೊಂಡಿದ್ದು ಸರಕಾರ ಜನರಿಗೆ ಉಳಿತಾಯ ಮಾಡಿದೆ. ಕಳೆದ ಅವಧಿಯಲ್ಲಿ 5 ಲೈನ ಮೇನ್ ಇದ್ದಲ್ಲಿ 45 ಲೈನ್ ಮೆನ್ ತಂದಿದ್ದೇನೆ ಮತ್ತೆ ಅದೇ ಪರಿಸ್ಥಿತಿ ಬಂದಿದೆ ಎಂದರೆ ಹಿಂದಿನ ಸರಕಾರದ ಹಣೆ ಬರಹ ಏನು? ಎಂದಿ ಸಚಿವ ವೈದ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಅರಣ್ಯ ಇಲಾಖೆ: ಮನೆ ರಿಪೇರಿ ಅಥವಾ ತುಂಬು ಕುಟುಂಬದ ಮನೆಗಳು ಪಕ್ಕದಲ್ಲಿಯೇ ಹೊಸ ಮನೆ ಕಟ್ಟಿಕೊಳ್ಳಲು ಅವಕಾಶ ಕೊಡಿ ಎಂದ ಸಚಿವರು ಇಲ್ಲವಾದಲ್ಲಿ ನೀವು ಸಮಸ್ಯೆ ಕೊಟ್ಟಿದ್ದಲ್ಲಿ ಜನರನ್ನು ಶೋಷಣೆ ಮಾಡಲು ಎಜೆಂಟರು ಹುಟ್ಟಿಕೊಳ್ಳಲು ಇಲಾಖೆ ದಾರಿ ಮಾಡಿಕೊಟ್ಟಂತಾಗುತ್ತದೆ. ಆದರೆ ಜಿಲ್ಲೆಯಲ್ಲಿ ಎಲ್ಲಿಯು ಸಹ ಹೊಸ ಅರಣ್ಯ ಅತಿಕ್ರಮಣಕ್ಕೆ ಒಂದು ಇಂಚು ಸಹ ಅವಕಾಶ ಕೊಡಲ್ಲ ಎಂದು ಸಚಿವ ಮಂಕಾಳ ತಿಳಿಸಿದರು.

300x250 AD

ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ: ತಾಲೂಕಿನಲ್ಲಿ 3 ಹೊಸ ಅಂಗನವಾಡಿ ಕಟ್ಟಡ ಮಂಜೂರಾಗಿದೆ ಎಂದು ಇಲಾಖೆಯ ಅಧಿಕಾರಿ ಹೇಳಿದರು. ಕ್ಷೇತ್ರದಲ್ಲಿ ಒಟ್ಟು ಸ್ವಂತ ಕಟ್ಟಡದಲ್ಲಿರದ 9 ಅಂಗನವಾಡಿ ಕೇಂದ್ರಗಳು ಸ್ವಂತ ನಿವೇಶನ ಹೊಂದಬೇಕು. ಅದಕ್ಕೆ ಪೂರಕವಾಗಿ ಅದರಲ್ಲಿಯೂ ನಗರ ಭಾಗದಲ್ಲಿ ಎರಡು ಗುಂಟೆ ಜಾಗವನ್ನು ಅಂಗನವಾಡಿ ಶಿಕ್ಷಕಿಯರು ಹುಡುಕಬೇಕು. ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ನಡೆಯಬಾರದು‌. 33 ವರ್ಷ ಆದರು ಸಹ ಜಾಗ ಹುಡುಕಲಿಲ್ಲ ಎಂದರೆ ಬೇಸರದ ವಿಚಾರ ಎಂದರು. ಸರಕಾರದಿಂದ ಕಟ್ಟಡ, ನಿವೇಶನಕ್ಕೆ ಸಹಕಾರ ಮಾಡಿಕೊಡಲಿದ್ದೇವೆ ಎಂದರು. ರಾಜ್ಯ ಸರಕಾರದ ಮಹತ್ವದ ಗೃಹ ಲಕ್ಷ್ಮೀ ಯೋಜನೆಯು 5,28,46000 ಕೋಟಿ ರೂ.ಹಣ ಭಟ್ಕಳದಲ್ಲಿ ಫಲಾನುಭವಿಗಳ ಖಾತೆಗೆ ಹೋಗುತ್ತಿವೆ ಎಂದು ಇಲಾಖೆಯ ಅಧಿಕಾರಿ ಹೇಳಿದರು. ಸದ್ಯ ಗ್ರಾಮ ಮಟ್ಟದಲ್ಲಿ ಫಲಾನುಭವಿಗಳ ಹೆಸರು ಬದಲಾವಣೆ ಹಾಗೂ ದಾಖಲೆ ಸರಿಪಡಿಸಲು ಶಿಬಿರ ನಡೆಯುತ್ತಿದ್ದು ಫಲಾನುಭವಿಗಳು ಇದರಲ್ಲಿ ಪಾಲ್ಗೊಳ್ಳಬೇಕು ಎಂದರು. ಸ್ವಂತ ವಾಹನ, ಕಟ್ಟಡದ ಬೇಡಿಕೆಯನ್ನು ಸಚಿವರ ಮುಂದೆ ಇಲಾಖೆಯ ಅಧಿಕಾರಿಗಳು ಮುಂದಿಟ್ಟಿದ್ದು ಇದನ್ನು ಈಡೇರಿಸುವ ಭರವಸೆ ಸಚಿವರು ನೀಡಿದರು.

ಪಿಡಬ್ಲೂಡಿ ಇಲಾಖೆ : ಜಿಲ್ಲೆಯಲ್ಲಿ ಶಾಲೆ ಅಂಗನವಾಡಿಗಳ ಕಟ್ಟಡ ವಿಚಾರಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಿದ್ದೇನೆ. ಆ ನಿಟ್ಟಿನಲ್ಲಿ ಒಂದು ಹಂತದಲ್ಲಿ ಭಟ್ಕಳದಲ್ಲಿ ಇವೆಲ್ಲವುಗಳ ರಸ್ತೆ ಸಂಪರ್ಕ ಸಮರ್ಪಕವಾಗಲು 200 ಸೇತುವೆ ಬೇಡಿಕೆಯಲ್ಲಿ ಸರಕಾರವು ರಾಜ್ಯದಲಿಯೇ ಹೆಚ್ಚು 50 ಸೇತುವೆ ಮಂಜೂರಿಗೆ ಒಪ್ಪಿಗೆ ನೀಡದೇ ಎಂದ ಸಚಿವರು ಪಿಡಬ್ಲೂ ಇಲಾಖೆಯಿಂದ ಕಾಮಗಾರಿ ಆರಂಭಗೊಳ್ಳಬೇಕಿದೆ ಎಂದರು. ಇನ್ನು 30 ಕೋಟಿ ಅಂದಾಜು ವೆಚ್ಚದಲ್ಲಿ ತಾಲೂಕಿನ ಬಂದರಿನಿಂದ ಸಾಗರ ರಸ್ತೆಯ ಸಾಲು ಮರದ ತಿಮ್ಮಕ್ಕ ಪಾರ್ಕ್ ತನಕ ರಸ್ತೆಯ ಎರಡು ಬದಿ ಇಂಟರಲಾಕ್ ಸಹಿತ ಮತ್ತು ಸ್ಟೀಲ್ ವಾಕ್ ಟ್ರಾಕ್ ರಚನೆಗೆ ಚಿಂತನೆ ನಡೆಸಲಾಗಿದೆ ಎಂದು ಸಚಿವ ಮಂಕಾಳು ವೈದ್ಯ ತಿಳಿಸಿದರು.

ಜಿಲ್ಲಾ ಪಂಚಾಯತ ಇಲಾಖೆ: ಜಿಲ್ಲೆಗೆ ಕುಡಿಯುವ ನೀರಿಗಾಗಿ 16.50 ಕೋಟಿ ರೂ. ರಾಜ್ಯದಲ್ಲಿಯೇ ಅತೀ ಹೆಚ್ಚು ಹಣ ಸರಕಾರ ನೀಡಿದೇ ಇದರಂತೆ ಭಟ್ಕಳಕ್ಕೂ ಸಹ ಹಣವನ್ನು ಬಿಡುಗಡೆಗೊಳಿಸಿದ್ದು ಇದರ ಸದುಪಯೋಗ ಜನರಿಗೆ ಸಿಗುವಂತೆ ಅಧಿಕಾರಿಗಳು ಕಾರ್ಯ ಪ್ರವ್ರತ್ತರಾಗಬೇಕು ಎಂದು ಸಚಿವರು ತಿಳಿಸಿದರು.

ಕಂದಾಯ ಇಲಾಖೆ: ಭಟ್ಕಳದ ಕಂದಾಯ ಇಲಾಖೆಯ ಭೂಮಿ ಕೇಂದ್ರದಲ್ಲಿ 6 ವರ್ಷವಾದರು ಪೂರ್ಣ ಹುದ್ದೆ ವರ್ಗಾಯಿಸಿದೇ ಕುಮಟಾದಲ್ಲಿ ಕೆಲಸ ನಿರ್ವಹಿಸುತ್ತಿರುವ ಕುರಿತು ಈ ಹಿಂದೆ ಸಚಿವ ಮಂಕಾಳ ವೈದ್ಯ ಅವರು ತಹಸೀಲ್ದಾರ ಕಚೇರಿಗೆ ದಿಢೀರ್ ಪರಿಶೀಲನೆ ವೇಳೆ ತಿಳಿದು ಬಂದಿದ್ದು ಇದನ್ನು ತಹಸೀಲ್ದಾರ ಅವರಿಗೆ ಗಮನಹರಿಸಿ ಅಧಿಕಾರ ಮತ್ತು ದಾಖಲೆ ಪತ್ರಗಳನ್ನು ಹಸ್ತಾಂತರಿಸುವಂತೆ ಸೂಚಿಸಿದ್ದರು. ಆದರೆ ಇನ್ನು ತನಕ ಆ ಸಿಬ್ಬಂದಿಯ ಮೇಲೆ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವದರಿಂದ ಸಚಿವರು ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರನ್ನು ತರಾಟೆಗೆ ತೆಗೆದುಕೊಂಡರು. ಈ ಬಗ್ಗೆ ತಹಸೀಲ್ದಾರ ಅವರು ಜಿಲ್ಲಾಧಿಕಾರಿ ಕಚೇರಿಗೆ ಪತ್ರ ಕಳುಹಿಸಿದ್ದು ಅಲ್ಲಿಂದ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದಕ್ಕೆ ಇನ್ನಷ್ಟು ಕೋಪಗೊಂಡ ಸಚಿವರು 6 ವರ್ಷದ ಹಿಂದಿನ ವರ್ಗಾವಣೆಗೊಂಡರು ಸಹ ಇನ್ ಚಾರ್ಜ್ ನೀಡದೇ ಚಾರ್ಜ್ ಪಡೆದಿರುವ ಸಿಬ್ಬಂದಿ ಮತ್ತು ಭೂಮಿ ಕೇಂದ್ರದ ಸಿಬ್ಬಂದಿ ತುಳಸಿದಾಸ ಅವರನ್ನು ಹುದ್ದೆಯಿಂದ ವಜಾಗೊಳಿಸುವಂತೆ ಸಚಿವರು ಸಹಾಯಕ ಆಯುಕ್ತರಿಗೆ ಸೂಚಿಸಿದರು ಮತ್ತು ತಹಸೀಲ್ದಾರ ಅವರ ಹೆಸರನ್ನು ಈ ಪ್ರಕರಣದಲ್ಲಿ ಸೇರಿಸಿ ನೋಟಿಸ್ ನೀಡುವಂತೆ ಸೂಚಿಸಿದ ಅವರು ಕಂದಾಯ ಇಲಾಖೆಯ ಅಧಿಕಾರಿಗಳು ಜನರ ಕೆಲಸವನ್ನು ಮಾಡುವ ಬದುಕು ಅಂಗಡಿ ಹಾಕಿಕೊಂಡಿದ್ದೀರಾ ಎಂದು ತಹಸೀಲ್ದಾರರನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಮಿಕ ಇಲಾಖೆ : ಇ-ಶ್ರಮ ಹಾಗೂ ಕಾರ್ಮಿಕ ಇಲಾಖೆ ಅಡಿಯಲ್ಲಿ ಪತ್ರಕರ್ತರಿಗೆ ಮತ್ತು ಪತ್ರಿಕಾ ವಿತರಕರಿಗೆ ಕಾರ್ಡ ನೀಡುವ ಕೆಲಸ ಮಾಡುವಂತೆ ಸಚಿವರು ಸೂಚಿಸಿದರು.

ಸರ್ವೇ ಇಲಾಖೆ: ಪೋಡಿ ಮುಕ್ತ ಗ್ರಾಮ ನಮ್ಮ ಅವಧಿಯಲ್ಲಿ ಇತ್ತು. ಸೂಸಗಡಿ ಹೊರತು ಪಡಿಸಿ ಗ್ರಾಮೀಣ ಭಾಗದಲ್ಲಿ ಮುಕ್ತಾಯವಾಗಿದೆ. ಇನ್ನು 4 ತಿಂಗಳಲ್ಲಿ ದ್ರೋಣ ಸರ್ವೇ ಕಾರ್ಯ ಮುಗಿಸಬೇಕು. ಆ ಬಳಿಕ ಭಟ್ಕಳದ ಸಂಪೂರ್ಣ ಚಿತ್ರಣವನ್ನು ಪ್ರೋಜೆಕ್ಟ್ರರ ಮೂಲಕ ನನಗೆ ತಿಳಿಸಿಬೇಕು ಎಂದು ಇಲಾಖೆಯ ಅಧಿಕಾರಿಗೆ ಸೂಚಿಸಿದ ಅವರು ಇದರಿಂದ ಸರಕಾರಕ್ಕೆ 1 ಸಾವಿರ ಕೋಟಿ ನಷ್ಟವಾಗಿದೆ ಎಂದು ತಿಳಿಸಿದರು.

ಕೆ.ಎಸ್.ಆರ್‌.ಟಿ.ಸಿ.: ಭಟ್ಕಳದಲ್ಲಿ 2,70 ಕೋಟಿ ರೂ. ಪ್ರತಿ ತಿಂಗಳು ಉಚಿತ ಬಸ್ ಪ್ರಯಾಣ ಹಣದ ಸರಕಾರ ಇಲಾಖೆಗೆ ನೀಡುತ್ತಿದೆ. ಈಗಾಗಲೇ ಕೋವಿಡನಿಂದ‌ ಸ್ಥಗಿತಗೊಂಡಿರುವ ಕೆಲ‌ಕಡೆಯ ಬಸ್ ಸಂಚಾರ ಪುನರಾರಂಭಿಸಬೇಕು ಇನ್ನು 10 ಹೊಸ ಬಸ್ ಪ್ರಸ್ತಾವನೆ ಸಲ್ಲಿಕೆ ನೀಡಿದ್ದು ಸರಕಾರದಿಂದ ಮಂಜೂರಾತಿ ಮಾಡಿಸಿಕೊಂಡು ಬರಲಿದ್ದೇನೆ ಎಂದು ಸಚಿವ ವೈದ್ಯ ತಿಳಿಸಿದರು. ಇನ್ನು ಎಲ್ಲಾ ಬಸ್ ಚಾಲಕರು, ನಿರ್ವಾಹಕರು ಜನರ ಜೊತೆಗೆ ವಿದ್ಯಾರ್ಥಿಗಳ ಜೊತೆಗೆ ಸೌಜನ್ಯದಿಂದ ವರ್ತನೆಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಡಾ.ನಯನಾ ಎನ್., ತಹಸೀಲ್ದಾರ ತಿಪ್ಪೆಸ್ವಾಮಿ, ತಾಲೂಕಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಪ್ರಭಾಕರ ಚಿಕ್ನಮನೆ, ಡಿವೈಎಸ್ಪಿ ಶ್ರೀಕಾಂತ ಕೆ. ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

Share This
300x250 AD
300x250 AD
300x250 AD
Back to top