ಸಿದ್ದಾಪುರ : ದಿನ ಕಳೆದಂತೆ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ ಸರ್ಕಾರದ ಸಂಬಳ ಪಡೆಯುವ ಸರ್ಕಾರಿ ನೌಕರರು ತಮ್ಮ ಮಕ್ಕಳನ್ನ ಸರ್ಕಾರಿ ಶಾಲೆಗಳಿಗೆ ಕಳುಹಿಸದೆ ಖಾಸಗಿ ಶಾಲೆಗಳಿಗೆ ಕಳುಹಿಸುವುದೇ ಇದಕ್ಕೆಲ್ಲ ಕಾರಣವಾಗಿದೆ, ಯಾವುದೇ ಸರಕಾರದ ತರಬೇತಿ ಇಲ್ಲದ ಸರಕಾರದ ಪರೀಕ್ಷೆಯಲ್ಲಿ ತೇರ್ಗಡೆಯಾಗದ ಖಾಸಗಿ ಶಾಲೆಯಲ್ಲಿ ಶಿಕ್ಷಣ ಕಲಿಸುವವರ ಮುಂದೆ ಇವರು ತಮ್ಮ ಮಕ್ಕಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ ಎಂದು ಕೇಳುವುದು ಎಷ್ಟು ಸರಿ ಎಂದು ಯೋಚಿಸಬೇಕಾದ ವಿಷಯವಾಗಿದೆ ಎಂದು ಕ್ಯಾದಗಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಕೃಷ್ಣ ನಾಯ್ಕ್ ಹೇಳಿದರು.
ಅವರು ತಾಲೂಕಿನ ವಂದಾನೆಯಲ್ಲಿ ನಡೆದ ವಂದಾನೆ ಸರಕಾರಿ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಾಲೆಯ ಸಭಾಭವನ ಹಾಗೂ ಹೆಚ್ಚಿನ ಕುಡಿಯುವ ನೀರಿನ ವ್ಯವಸ್ಥೆ ಆಟದ ಮೈದಾನ ಮುಂತಾದ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಈಗಾಗಲೇ ರೂಪರೇಷೆ ರೆಡಿ ಮಾಡಿ ಕೆಲಸವನ್ನು ಪ್ರಾರಂಭಿಸಲಾಗುತ್ತದೆ. ಸಹಕಾರ ನೀಡಬೇಕೆ ಹೊರತು ತೊಂದರೆ ನೀಡಬಾರದು ಎಂದರು.
ಮಕ್ಕಳ ಹಸ್ತಾಕ್ಷರ ಬೆಳಕು ಪತ್ರಿಕೆ ಬಿಡುಗಡೆಗೊಳಿಸಿದ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ ಮಾತನಾಡಿ ಇಂದು ದೇಶದಲ್ಲಿ ಉಜ್ವಲವಾದ ಸಾಧನೆ ಮಾಡಿದವರನ್ನು ನೋಡಿದರೆ ಎಲ್ಲರೂ ಕೂಡ ಹಳ್ಳಿಯ ಮೂಲಗಳಿಂದ ಮತ್ತು ಸರ್ಕಾರಿ ಶಾಲೆಯಲ್ಲಿ ಓದಿದವರೆ ಹೆಚ್ಚಿನವರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಅರ್ಹತೆ ಇರುವ ವಿದ್ಯಾರ್ಥಿಗಳು ಬಹಳಷ್ಟು ಇದ್ದಾರೆ. ಪಾಲಕರು ಹಾಗೂ ಶಿಕ್ಷಕರು ಸರಿಯಾದ ಮಾರ್ಗದರ್ಶನ ನೀಡಿ ಇಂತಹ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಒದಗಿಸಿಕೊಡಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ವಿವಿಧ ಸ್ಪರ್ಧೆ ಹಾಗೂ ಆಟೋಟಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಕೃಷ್ಣ ಎಂ. ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ವಂದಾನೆ ಹೈಸ್ಕೂಲ್ ಮುಖ್ಯಧ್ಯಾಪಕ ಟಿ.ಎನ್.ಗೌಡ, ದೊಡ್ಮನೆ ಶಾಲೆ ಶಿಕ್ಷಕ ಎಂ.ಐ.ಹೆಗಡೆ, ಸಿ.ಆರ್.ಪಿ ಭಾಸ್ಕರ್ ಮಡಿವಾಳ, ಎಸ್ ಬಿ ನಾಯ್ಕ್ ಬಿ, ಎಲ್ ನಾಯ್ಕ್ ಮಾತನಾಡಿದರು, ಪ್ರಮುಖರಾದ ಗಿರಿಜಾ ಬಂಡಾರಕರ, ಚೌಡು ಗೌಡ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಸುಮತಿ ನಾಯ್ಕ್ ಗಣಪತಿ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು. ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮಿ ಜಿ ನಾಯ್ಕ್ ಸ್ವಾಗತಿಸಿದರು, ಸಹ ಶಿಕ್ಷಕಿ ವಿದ್ಯಾ ಭಟ್ ವಾರ್ಷಿಕ ವರದಿ ವಾಚಿಸಿದರು, ಸಹ ಶಿಕ್ಷಕಿ ವೀಣಾ ನಾಯ್ಕ್ ನಿರೂಪಿಸಿದರು, ಎಸ್ ಡಿ ಎಂ ಸಿ ಸದಸ್ಯ ಮಂಜುನಾಥ್ ನಾಯ್ಕ್ ವಂದಿಸಿದರು.