ಹಳಿಯಾಳ: ಭಾರತ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ‘ಭವಿಷ್ಯ ನಿಧಿ ನಿಮ್ಮ ಬಳಿಗೆ’ ಸಂಪರ್ಕ ಕಾರ್ಯಕ್ರಮ ಕೆಎಲ್ಎಸ್ ವಿಡಿಐಟಿ ಹಳಿಯಾಳದಲ್ಲಿ ಡಿಸೆಂಬರ್ 27ರಂದು ಆಯೋಜಿಸಲಾಗಿತ್ತು.
ನೌಕರರ ಭವಿಷ್ಯ ನಿಧಿ ಸಂಸ್ಥೆ ಕಾರವಾರ ಶಾಖೆಯ ಪ್ರವರ್ತನ ಅಧಿಕಾರಿ ಎಸ್.ಶ್ರೀಕುಮಾರ್ ಮತ್ತು ದಾಂಡೇಲಿಯ ಕಾರ್ಮಿಕ ರಾಜ್ಯ ವಿಮಾ ನಿಗಮದ ನಿರ್ವಾಹಕ ಮೋಹನ್ ಸವಣೂರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.
ನೌಕರರು ಭವಿಷ್ಯ ನಿಧಿಯಿಂದ ಪಡೆಯಬಹುದಾದ ಸೌಲಭ್ಯಗಳ ಕುರಿತಾಗಿ ಶ್ರೀಕುಮಾರ್ ವಿವರಿಸಿ, ಭವಿಷ್ಯ ನಿಧಿಯಿಂದ ಹಣವನ್ನು ತೆಗೆಯುವ ಸಂದರ್ಭದಲ್ಲಿ ನೌಕರರು ನೀಡಬೇಕಾದ ದಾಖಲೆಗಳ ವಿವರ ನೀಡುತ್ತ, ಹಣ ಹಿಂಪಡೆಯುವ ಸಂದರ್ಭದಲ್ಲಿ ಎದುರಾಗುವ ತೊಂದರೆಗಳ ಕುರಿತಾಗಿಯೂ ಸವಿಸ್ತಾರವಾಗಿ ವಿವರಿಸಿದರು. ಮೋಹನ್ ಸವಣೂರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಕಾರ್ಮಿಕ ವಿಮಾ ನಿಗಮವು ಕಾರ್ಮಿಕರಿಗೆ ಒದಗಿಸುತ್ತಿರುವ ಸೌಲಭ್ಯಗಳ ಕುರಿತು ಅರಿವು ಮೂಡಿಸಿದರು. ಕೌಟುಂಬಿಕ ಆರೋಗ್ಯ ಸಮಸ್ಯೆಗೆ ವಿಮಾ ನಿಗಮದಿಂದ ಕಾರ್ಮಿಕರಿಗೆ ಆಸ್ಪತ್ರೆಯಲ್ಲಿ ದೊರೆಯುವ ರಿಯಾಯತಿಯ ಕುರಿತು ವಿವರಿಸಿದರು. ಮಹಿಳಾ ಕಾರ್ಮಿಕರಿಗೆ ಮಾತೃತ್ವ ರಜೆಯಲ್ಲಿ ದೊರೆಯುವ ಸೌಲಭ್ಯಗಳ ವಿವರಣೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಡಾ. ವಿ ಎ ಕುಲಕರ್ಣಿ ನೌಕರರು ಹಾಗೂ ಕಾರ್ಮಿಕರು ಭವಿಷ್ಯ ನಿಧಿ ಮತ್ತು ವಿಮಾ ನಿಗಮದ ಕುರಿತು ತಿಳುವಳಿಕೆ ಹೊಂದುವುದು ಅವಶ್ಯವಾಗಿದ್ದು ಈ ನಿಟ್ಟಿನಲ್ಲಿ ಸಂಪರ್ಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.
ಶ್ರೀಮತಿ ಸ್ಮಿತಾ ಜೋಶಿ ಸ್ವಾಗತಿಸಿದರು. ಶ್ರೀಮತಿ ಶುಭಲಕ್ಷ್ಮಿ ನಾಜರೆ ವಂದಿಸಿದರು. ವಿಡಿಐಟಿ ಮಹಾವಿದ್ಯಾಲಯ, ವಿ ಆರ್ ಡಿ ಎಂ ಟ್ರಸ್ಟ್, ನೌಕರರ ಭವಿಷ್ಯ ನಿಧಿ ಸಂಸ್ಥೆ ಕಾರವಾರ ಶಾಖೆ ಇವರುಗಳ ಸಹಯೋಗದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ನೂರಕ್ಕೂ ಅಧಿಕ ನೌಕರರು ಹಾಗೂ ಕಾರ್ಮಿಕರು ಪಾಲ್ಗೊಂಡಿದ್ದರು.