ಕಾರವಾರ: ಜಿಲ್ಲೆಯ ಗೋಕರ್ಣ ಸೇರಿದಂತೆ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸ್ವಸಹಾಯ ಸಂಘಗಳ ಮಹಿಳೆಯರ ಸೇವೆ ಪಡೆದು ಪ್ರತಿದಿನ ನಿರಂತರವಾಗಿ ಹಸಿ, ಒಣ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸುವ ಕಾರ್ಯವಾಗಬೇಕು ಎಂದು ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತರಾದ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಸೂಚಿಸಿದರು.
ಜಿಲ್ಲೆಯ ಕುಮಟಾ ತಾಲ್ಲೂಕಿನ ಗೋಕರ್ಣ ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಸ್ವಚ್ಛತೆ ಕುರಿತು ಸ್ಥಳ ಪರಿಶೀಲಿಸಿದ ನಂತರ ಗ್ರಾಮ ಪಂಚಾಯತಿ ಸಭಾಂಗಣದಲ್ಲಿ ಜರುಗಿದ ಜೈ ಗಣೇಶ ಸಂಜೀವಿನಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದ ಸದಸ್ಯರೊಂದಿಗೆ ಸಂವಾದ ನಡೆಸಿ ಅವರು ಮಾತನಾಡಿ, ಕಸ ವಿಲೇವಾರಿ ಸಮಸ್ಯೆ ನಿವಾರಣೆಗೆ ಎಸ್ಹೆಚ್ಜಿ ಮಹಿಳೆಯರನ್ನು ಒಗ್ಗೂಡಿಸಿಕೊಂಡು ಅವರಿಗೆ ದಿನ ಕೂಲಿ ನೀಡಿ ತ್ಯಾಜ್ಯ ಉತ್ಪತ್ತಿಯಾಗುವ ಪ್ರತಿ ಜಾಗದಲ್ಲಿ ಮಹಿಳಾ ಸದಸ್ಯರನ್ನು ನಿಯೋಜಿಸಿ ಎಲ್ಲೆಂದರಲ್ಲಿ ಕಸ ಚೆಲ್ಲುವವರಿಗೆ ತ್ಯಾಜ್ಯ ಎಸೆಯದಂತೆ ಸೂಕ್ತ ನಿರ್ದೆಶನ ನೀಡುವಂತಹ ಕೆಲಸವಾಗಬೇಕು. ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲ್ ಬದಲಿಗೆ ಮರು ಬಳಕೆಗೆ ಪೂರಕವಾಗುವಂತಹ ಗಾಜಿನ ಬಾಟಲ್ ಬಳಕೆಗೆ ಅರಿವು ಮೂಡಿಸಬೇಕು. ಕಸ ವಿಲೇವಾರಿ ವಾಹನಗಳ ಚಾಲನೆಗೆ ಮಹಿಳೆಯರಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು, ಚಾಲನಾ ತರಬೇತಿ ಜೊತೆಗೆ ಡಿಎಲ್ ಸಹ ಕೊಡಿಸಲಾಗುತ್ತಿದೆ. ಹೀಗಾಗಿ ಮಹಿಳೆಯರು ಕಸ ವಿಲೇವಾರಿ ವಾಹನ ಚಾಲನೆಗೆ ಮುಂದಾಗಬೇಕು. ನರೇಗಾ ಹಾಗೂ ಎನ್ಆರ್ಎಲ್ಎಂ ಯೋಜನೆಯಡಿ ಮೀನು, ಕುರಿ, ಮೇಕೆ, ಕೋಳಿ ಸಾಕಾಣಿಕೆಗೂ ಅವಕಾಶವಿದ್ದು, ಮಹಿಳೆಯರು ಈ ಅವಕಾಶಗಳ ಸದುಪಯೋಗ ಪಡೆಯಬೇಕು. ಹೆಚ್ಚಿನದಾಗಿ ಪ್ಲಾಸ್ಟಿಕ್ ಬ್ಯಾಗ್ ಬಳಸುತ್ತಿದ್ದು, ಸ್ವಸಹಾಯ ಸಂಘಗಳ ಮಹಿಳೆಯರು ಬಟ್ಟೆಯ ಬ್ಯಾಗ್ ತಯಾರಿಕೆಗೆ ಒತ್ತು ನೀಡುವ ಮೂಲಕ ಬಟ್ಟೆ ಬ್ಯಾಗ್ ಬಳಕೆಗೆ ಪ್ರೇರೇಪಿಸಬೇಕು ಎಂದರು.
ಇದೇ ವೇಳೆ ಗೋಕರ್ಣ ಗ್ರಾಮ ಪಂಚಾಯತಿಯಲ್ಲಿ ಜಿಲ್ಲಾ ಪಂಚಾಯತ್ ನಿಂದ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿರುವ ಗ್ರೀನ್ ಗೋಕರ್ಣ ಯೋಜನೆ ಪರಿಕಲ್ಪನೆ ಹಾಗೂ ರಾಜ ಕಾಲುವೆ ಗ್ರೇ ವಾಟರ್ ಮ್ಯಾನೇಜ್ಮೆಂಟ್ ಕಾಮಗಾರಿಯ ಕುರಿತು ಎಸ್ಬಿಎಂ ಯೋಜನೆ ಸಮಾಲೋಚಕರು ಹಾಗೂ ಪಿಆರ್ಇಡಿ ಇಂಜಿನಿಯರ್ ಜೊತೆಗೆ ಸಮಾಲೋಚನೆ ನಡೆಸಿ ಹಲವು ಸಲಹೆ-ಸೂಚನೆಗಳನ್ನು ನೀಡಿದರು.
ನಂತರದಲ್ಲಿ ತಾವು ಗೋಕರ್ಣದಲ್ಲಿ ಸಂಚರಿಸಿ ವೀಕ್ಷಿಸಿದ ಕಸ ವಿಲೇವಾರಿ ಸಮಸ್ಯೆಗಳ ಕುರಿತು ಚರ್ಚಿಸಿ ವ್ಯವಸ್ಥಿತವಾಗಿ ಕಸ ಸಂಗ್ರಹಣೆ, ಜನರು ಪಿತೃ ಕಾರ್ಯಕ್ಕೆ ಬಂದು ಬಿಟ್ಟು ಹೋಗುವ ಬಟ್ಟೆ ವಿಲೇವಾರಿ, ಅಂಗಡಿಗಾರರು, ಮೀನು ಮಾರಾಟಗಾರರು ಕಸ ಸಂಗ್ರಸಿಸಿ ಬೆಂಕಿ ಹಾಕುವ ಪ್ರಕ್ರಿಯೆ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಜಿಲ್ಲಾ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು.
ತದನಂತರದಲ್ಲಿ ಗೋಕರ್ಣ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗೃಹಲಕ್ಷ್ಮೀ ಯೋಜನೆಯಡಿ ಬ್ಯಾಂಕ್ ಖಾತೆಗೆ ಆಧಾರ ಜೋಡಣೆ ಹಾಗೂ ಇ-ಕೆವೈಸಿ ಅಪ್ಡೇಟ್ ಕುರಿತು ಇಂದಿನಿಂದ ಪ್ರಾರಂಭವಾಗಿರುವ ವಿಶೇಷ ಕ್ಯಾಂಪ್ಗೆ ಭೇಟಿ ನೀಡಿ ವೀಕ್ಷಿಸಿದರು. ಎಸ್ಬಿಎಂ ಯೋಜನೆಯಡಿ ಆರ್ಡಬ್ಲ್ಯುಎಸ್ ನಿಂದ ಅಭಿವೃದ್ಧಿಪಡಿಸಲಾಗುತ್ತಿರುವ ಎಫ್ಎಸ್ಟಿಪಿ ಹಾಗೂ ಎಂಆರ್ಎಫ್ ಘಟಕ ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದರು. ಹಾಗೇ ತೊರ್ಕೆ ಗ್ರಾಮ ಪಂಚಾಯತಿಯ ಸುಸಜ್ಜಿತ ನೂತನ ಕಟ್ಟಡ, ಡಿಜಿಟಲ್ ಗ್ರಂಥಾಲಯ ಕೇಂದ್ರಕ್ಕೆ ತೆರಳಿ ಮಕ್ಕಳ ಕಲಿಕೆಗೆ ಪೂರಕವಾಗಿ ಒದಗಿಸಲಾದ ಪಠ್ಯಪುಸ್ತಕ ಲಭ್ಯತೆ, ಗ್ರಾಪಂ ವ್ಯವಸ್ಥೆ, ಶಾಲಾ ಕೊಠಡಿ, ಹೈಟೆಕ್ ಕಂಪ್ಯೂಟರ್ ಅಳವಡಿಕೆ ಬಗ್ಗೆ ಪ್ರಶಂಸಿದರು. ನಂತರ ನಾಡುಮಾಸ್ಕೇರಿ ಗ್ರಾಮ ಪಂಚಾಯತಿಗೆ ಭೇಟಿನೀಡಿ ಮಹಿಳಾ ಸ್ವಸಹಾಯ ಗುಂಪುಗಳ ಮಹಿಳೆಯರು ಹಾಗೂ ಎಸ್ಬಿಎಂನ ಕಸ ವಿಲೇವಾರಿ ವಾಹನ ಚಾಲಕರೊಂದಿಗೆ ಸಮಾಲೋಚನೆ ನಡೆಸಿ ಹರ್ಷ ವ್ಯಕ್ತಪಡಿಸಿದರು. ಹಾಗೇ ಕಸ ವಿಲೇವಾರಿ ಘಟಕ, ಗ್ರಂಥಾಲಯಕ್ಕೆ ಭೇಟಿನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ನ ಆಡಳಿತ ಹಾಗೂ ಅಭಿವೃದ್ಧಿ ಶಾಖೆಯ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ, ಎನ್.ಜಿ. ನಾಯಕ, ಸಹಾಯಕ ಕಾರ್ಯದರ್ಶಿ ಜೆ.ಆರ್. ಭಟ್, ತಾಲ್ಲೂಕು ಪಂಚಾಯತ್ನ ಕಾರ್ಯನಿರ್ವಾಹಕ ಅಧಿಕಾರಿ ಆರ್.ಎಲ್. ಭಟ್, ಗ್ರಾಮ ಪಂಚಾಯತಿಗಳ ಚುನಾಯಿತ ಜನಪ್ರತಿನಿಧಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಿಆರ್ಇಡಿ ಹಾಗೂ ಆರ್ಡಬ್ಲ್ಯುಎಸ್ನ ಎಇಇ, ಜೆಇ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯತ್ ಎಸ್ಬಿಎಂ, ಎನ್ಆರ್ಎಲ್ಎಂ, ನರೇಗಾ ಸಮಾಲೋಚಕರು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.