ಜೋಯಿಡಾ : ದಟ್ಟ ಕಾಡಿನ ನಡುವೆ ದುಮ್ಮಿಕ್ಕುವ ಕಾಳಿ ನದಿ. ಅದೇ ಕಾಳಿ ನದಿಯ ತಟದಲ್ಲಿರುವ ಮೌಳಂಗಿ ಇಕೋ ಪಾರ್ಕ್. ಅಂದ ಹಾಗೆ ಈ ಇಕೋ ಪಾರ್ಕ್ ಜೋಯಿಡಾ ತಾಲೂಕು ವ್ಯಾಪ್ತಿಗೊಳಪಟ್ಟರೂ, ದಾಂಡೇಲಿ ತಾಲೂಕಿಗೆ ಹತ್ತಿರದಲ್ಲಿದೆ.
ಜೋಯಿಡಾ – ದಾಂಡೇಲಿ ತಾಲ್ಲೂಕಿನ ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ಮೌಳಂಗಿ ಇಕೋ ಪಾರ್ಕಿಗೆ ವರ್ಷಾಂತ್ಯದ ದಿನಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಬರುತ್ತಿದ್ದಾರೆ.ಮೊನ್ನೆ ಕ್ರಿಸ್ಮಸ್‌ನಿಂದ ಆರಂಭವಾದ ಜನಸಾಗರ ಜನವರಿ ಒಂದರವರೆಗೆ ಮುಂದುವರಿಯಲಿದೆ. ಇಂದು ಬುಧವಾರವು ಹೆಚ್ಚಿನ ಪ್ರಮಾಣದಲ್ಲಿ ಪ್ರವಾಸಿಗರು ಮೌಳಂಗಿ ಇಕೋ ಪಾರ್ಕಿಗೆ ಬಂದಿದ್ದು, ಇಲ್ಲಿಯ ವೈಶಿಷ್ಟ್ಯವನ್ನು ಹಾಗೂ ಸುಂದರ ಪರಿಸರ ಮತ್ತು ವ್ಯವಸ್ಥೆಯನ್ನು ಆಸ್ವಾದಿಸಿದ್ದಾರೆ.
ಕಾಳಿ ನದಿಯಲ್ಲಿ ಜಲ ಸಾಹಸ ಕ್ರೀಡೆಗಳು ಆಕರ್ಷಕ ಎನಿಸಿದರೇ, ಇನ್ನೂ ವಾಟರ್ ಸ್ಪೈಲಾರ್ಕ್ ಸ್ಲೈಡ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಪಾರ್ಕಿನೊಳಗಡೆ ಜೋಕಾಲಿ, ಜಂಪಿಂಗ್, ಗೊಂಬೆಗಳು, ಜೋಕಾಲಿಗಳು ಮಕ್ಕಳು ಮಾತ್ರವಲ್ಲದೇ ಹಿರಿ ಕಿರಿಯರ ಮನಸ್ಸಿಗೂ ಮುದವನ್ನು ತಂದುಕೊಡುತ್ತಿದೆ.
ಈ ಸುಂದರವಾದ ಪ್ರಕೃತಿ ಸಂಪತ್ತನ್ನು ಎಲ್ಲಿಯೂ ಧಕ್ಕೆಯಾಗದ ರೀತಿಯಲ್ಲಿ, ಪರಿಸರ ಹಾಗೂ ನದಿಯ ಸಂರಕ್ಷಣೆಯನ್ನು ಗಮನದಲ್ಲಿಟ್ಟುಕೊಂಡು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಒತ್ತು ನೀಡಿರುವ ಅರಣ್ಯ ಇಲಾಖೆಯ ಕ್ರಮಕ್ಕೆ ಪ್ರವಾಸಿಗರು ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಸಿ.ಎಚ್ ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಕೆ ಶೇಟ್ ಅವರ ಮಾರ್ಗದರ್ಶನದಲ್ಲಿ ವಲಯರಣ್ಯಾಧಿಕಾರಿ ಅಪ್ಪರಾವ್ ಕಲಶೆಟ್ಟಿ ಅವರ ನೇತೃತ್ವದಲ್ಲಿ ಉಪ ವಲಯಾರಣ್ಯಾಧಿಕಾರಿ ಆನಂದ್ ರಾಥೋಡ್ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದಲ್ಲಿ ಹಾಗೂ ವಿನೋದ್ ಮೈನಾಗೋಳ ಅವರ ಅಧ್ಯಕ್ಷತೆಯ ಗ್ರಾಮ ಅರಣ್ಯ ಸಮಿತಿಯ ಪದಾಧಿಕಾರಿಗಳ ಸದಸ್ಯರ ತುಂಬು ಹೃದಯದ ಸಹಕಾರದೊಂದಿಗೆ ಇಕೋ ಪಾರ್ಕಿನ ಸಿಬ್ಬಂದಿಗಳು ಪಾರ್ಕ್ ನಿರ್ವಹಣೆಯಲ್ಲಿ ತಮ್ಮನ್ನು ತಾವು ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದಾರೆ.