ಅಂಕೋಲಾ: ತಾಲೂಕಿನ ಅವರ್ಸಾದ ರಾ.ಹೆ. 66 ರಲ್ಲಿ ಮಂಗಳವಾರ ಬೆಳಗಿನ ಜಾವ ಭೀಕರ ರಸ್ತೆ ಅಪಘಾತವೊಂದರಲ್ಲಿ ವಾಹನವೊಂದು ಪಾದಾಚಾರಿ ಮಹಿಳೆಗೆ ಜೋರಾಗಿ ಬಡಿದ ಪರಿಣಾಮ, ಮಹಿಳೆ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸಂಭವಿಸಿದೆ.
ಡೋಂಗ್ರಿ ಪಂಚಾಯತ್ ಹೆಗ್ಗರಣಿ ಮೂಲದ ದೀಪಾ (ಶಾಲಿನಿ ) ಅಶೋಕ ನಾಯ್ಕ ( 52) ಮೃತ ದುರ್ದೈವಿ ಆಗಿದ್ದು, ಈ ಮಹಿಳೆ ತನ್ನ ಹೆಣ್ಣು ಮಕ್ಕಳ ಜೊತೆ ಅವರ್ಸಾದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದು, ದಿನ ನಿತ್ಯದಂತೆ ಮಾರ್ನಿಂಗ್ ವಾಕ್ ಇಲ್ಲವೇ ಇನ್ನಿತರೇ ಕಾರಣಗಳಿಂದ ಹೆದ್ದಾರಿ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಗೋವಾದ ಟ್ರಿಪ್ ಮುಗಿಸಿ ಗೋಕರ್ಣ ಕಡೆ ತೆರಳುತ್ತಿದ್ದರು ಎನ್ನಲಾಅ ಕೋಲಾರ – ಮುಳಬಾಗಲು ಮತ್ತಿತರೆಡೆಯ ಪ್ರವಾಸಿಗ ಯುವಕರಿದ್ದ XUV 500 ವಾಹನ ಚಾಲಕನ ನಿಯಂತ್ರಣ ತಪ್ಪಿ ಪಾದಾಚಾರಿ ಮಹಿಳೆಗೆ ಜೋರಾಗಿ ಡಿಕ್ಕಿ ಪಡೆಸಿದ್ದಲ್ಲದೇ, ಹೆದ್ದಾರಿ ಅಂಚಿನ ಪುಟಪಾತ್ ದಾಟಿ ಪಕ್ಕದ ಪ್ರದೇಶಕ್ಕೆ ನುಗ್ಗಿದ್ದು, ಅಪಘಾತದ ತೀವ್ರತೆಗೆ ಮಹಿಳೆಗೆ ತೀವ್ರ ಗಾಯ ನೋವುಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ.
ತುರ್ತು ಕರೆಯ ಮೇರೆಗೆ 108 ಅಂಬುಲೆನ್ಸ್ ವಾಹನ ತೆರಳಿತ್ತಾದರೂ, ಮಹಿಳೆ ಮೃತ ಪಟ್ಟಿದ್ದರಿಂದ ಎನ್ ಎಚ್ ಎ ಐ (ಹೆದ್ದಾರಿ ಸುರಕ್ಷತಾ ) ವಾಹನದ ಮೂಲಕ ಮೃತ ದೇಹವನ್ನು ,ಮರ ಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಶಿವಾ ನಾಯ್ಕ ಮತ್ತಿತರರು ಸಹಕರಿಸಿದರು. ಅಂಕೋಲಾ ಪೋಲೀಸರು ಸಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕಾನೂನು ಕ್ರಮ ಮುಂದುವರೆಸಿದ್ದು, ಅಪಘಾತದ ಘಟನೆ ಕುರಿತಂತೆ ಪೋಲೀಸರಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಮೃತ ಮಹಿಳೆ, ಅಂಕೋಲಾದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿ ಓರ್ವರ ತಾಯಿಯಾಗಿದ್ದು, ಊರಿನ ಹಾಗೂ ಕುಟುಂಬದ ಎಲ್ಲರೊಂದಿಗೂ ಪ್ರೀತಿ ವಿಶ್ವಾಸದಿಂದ ಬಾಳಿ ಬದುಕಿದ್ದು, ಹಲವರ ಸಂಕಷ್ಟದಲ್ಲಿ ಯಜಮಾನಿಯಾಗಿ ನಿಂತು ಸಂಕಷ್ಟ ಪರಿಹಾರಕ್ಕೆ ಮುಂದಾಗುತ್ತಿದ್ದಳು ಎನ್ನಲಾಗಿದೆ.