Slide
Slide
Slide
previous arrow
next arrow

ಸ್ಥಳೀಯ ಪರಿಸರಕ್ಕೆ ಧಕ್ಕೆಯಾಗದಂತೆ ಯೋಜನೆಗಳು ಕಾರ್ಯಗತಗೊಳ್ಳಬೇಕು: ಸುರೇಶ ಪ್ರಭು

300x250 AD

ಶಿರಸಿ: ಇಲ್ಲಿನ ಹೊಟೇಲ್ ಸುಪ್ರಿಯಾ ಇಂಟರ್‌ನ್ಯಾಷನಲ್ ಸಭಾಭವನದಲ್ಲಿ ಡಿ.22,ಶುಕ್ರವಾರ ಶಿರಸಿ ಅರ್ಬನ ಸಹಕಾರಿ ಬ್ಯಾಂಕು ಹಾಗೂ ಡಾ|| ವಿ. ಎಸ್ ಸೋಂದೆ ಫೌಂಡೇಷನ ಸಹಯೋಗದೊಂದಿಗೆ, ಡಾ|| ವಿ. ಎಸ್ ಸೋಂದೆ ಸ್ಮರಣಾರ್ಥ ದ್ವಿತೀಯ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸಿ ಅರ್ಬನ್ ಬ್ಯಾಂಕಿನ ಅಧ್ಯಕ್ಷರಾದ ಜಯದೇವ ಯು. ನಿಲೇಕಣಿ ವಹಿಸಿ ಭಾಗವಹಿಸಿದ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು. ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶ್ರೀಮತಿ ಆರತಿ ಎಸ್. ಶೆಟ್ಟರ್ ಉಪನ್ಯಾಸ ನೀಡಲು ಆಗಮಿಸಿದ ಸುರೇಶ ಪ್ರಭು ಕುರಿತು ಸಭೆಗೆ ಪರಿಚಯಿಸಿದರು. ಮುಖ್ಯ ಅತಿಥಿಗಳಾಗಿ ಶಾಸಕ ಭೀಮಣ್ಣ ಟಿ. ನಾಯ್ಕ ಪಾಲ್ಗೊಂಡಿದ್ದರು.

ಶಾಸಕ ಭೀಮಣ್ಣ ಟಿ. ನಾಯ್ಕ, ಡಾ.ವಿ.ಎಸ್ ಸೋಂದೆಯವರೊಂದಿಗೆ ತಮ್ಮ ಒಡನಾಟದ ನೆನಪುಗಳನ್ನು ಮೆಲಕು ಹಾಕುವುದರೊಂದಿಗೆ, ಸಹಕಾರಿ ಬ್ಯಾಂಕಿಂಗ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಡಾ.ವಿ.ಎಸ್ ಸೋಂದೆಯವರು ನೀಡಿದ ಕೊಡುಗೆಗಳನ್ನು ಹಾಗೂ ಡಾ. ಸೋಂದೆಯವರು ತಮಗೆ ಕೃಷಿ ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಯಶಸ್ವಿಯಾಗಿ ಹೊರಹೊಮ್ಮಲು ನೀಡಿದ ಸಹಕಾರವನ್ನು ಸ್ಮರಿಸಿದರು. ಬ್ಯಾಂಕಿನೊಂದಿಗಿನ ತಮ್ಮ ಸುದೀರ್ಘ ಒಡನಾಟವನ್ನು ಸ್ಮರಿಸುತ್ತಾ, ಬ್ಯಾಂಕು ಇತ್ತೀಚಿನ ದಿನಗಳಲ್ಲಿ ತನ್ನ ಪ್ರಾಮಾಣಿಕ ಹಾಗೂ ಪರಿಶ್ರಮದ ಸೇವೆಯ ಮೂಲಕ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಅತ್ಯಂತ ಸದೃಢವಾಗಿ ಬೆಳವಣಿಗೆ ಹೊಂದುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದ “ಡಾ|| ವಿ.ಎಸ್. ಸೋಂದೆ ದ್ವಿತೀಯ ಸ್ಮರಣಾರ್ಥ ಉಪನ್ಯಾಸ” ಕಾರ್ಯಕ್ರಮವನ್ನು ನೀಡಿದ ರಾಷ್ಟ್ರೀಯ ಸಹಕಾರ ನೀತಿ ಸಮಿತಿಯ ಅಧ್ಯಕ್ಷರು ಹಾಗೂ ಕೇಂದ್ರ ಸರಕಾರದ ಮಾಜಿ ಸಚಿವರಾದ ಸುರೇಶ ಪ್ರಭಾಕರ ಪ್ರಭು “ಭಾರತದ ಭವಿಷ್ಯದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿಗಳ ಪಾತ್ರ” ಎಂಬ ವಿಷಯದ ಕುರಿತು ಉಪನ್ಯಾಸವನ್ನು ನೀಡುತ್ತಾ, ದೇಶವು ಆರ್ಥಿಕ ಪ್ರಗತಿಯನ್ನು ಹೊಂದುವುದರ ಜೊತೆ ಸಾಮಾಜಿಕ ಪ್ರಗತಿಯನ್ನು ಹೊಂದುವುದು ಅತೀ ಅವಶ್ಯಕವಾಗಿದ್ದು, ಇದು ಸಾಕಾರಗೊಳ್ಳಲು ಸಹಕಾರ ರಂಗದಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು.
ಭಾರತ ದೇಶವು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿದ್ದು, ಪ್ರಧಾನ ಮಂತ್ರಿಗಳ ಕನಸಿನಂತೆ ಭಾರತ ಮುಂದಿನ 5 ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕತೆಯ ದೇಶವಾಗಿ ಹೊರಹೊಮ್ಮಲು ಸಹಕಾರ ಕ್ಷೇತ್ರದ ಹಾಗೂ ಸಹಕಾರಿಗಳ ಪಾತ್ರ ಮಹತ್ತರವಾಗಿರುತ್ತದೆ. ದೇಶವು ಪ್ರಗತಿಯನ್ನು ಕಾಣಲು ಪ್ರತಿ ಜಿಲ್ಲೆಗಳು ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯನ್ನು ಕಾಣುವ ಅವಶ್ಯಕತೆಯನ್ನು ಅವರು ವಿವರಿಸಿದರು ಹಾಗೂ ಈಗಾಗಲೇ ತಾವು ಪ್ರಯೋಗಾತ್ಮಕವಾಗಿ ದೇಶದ 6 ಜಿಲ್ಲೆಗಳನ್ನು ಆಯ್ಕೆಮಾಡಿದ್ದು, ಈ ಜಿಲ್ಲೆಗಳು 2 ರಿಂದ 3 ಪ್ರತಿಶತ ಹೆಚ್ಚಿನ ಆರ್ಥಿಕ ಪ್ರಗತಿ ಕಂಡಿರುವ ವಿಷಯವನ್ನು ತಮ್ಮ ಉಪನ್ಯಾಸದಲ್ಲಿ ಅವರು ತಿಳಿಸುತ್ತಾ, ಸ್ಥಳೀಯ ಪರಿಸರಕ್ಕೆ ಧಕ್ಕೆಯಾಗದಂತೆ ಸಹಕಾರ ತತ್ವದಡಿ ಬೆಳವಣಿಗೆ ನಡೆಸುವ ಯೋಜನೆಗಳು ಕಾರ್ಯಗತಗೊಳ್ಳಬೇಕೆಂದು ಅವರು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.

300x250 AD

ಗುಜರಾತಿನ “ಅಮುಲ್” ಸಂಸ್ಥೆಯನ್ನು ಉದಾಹರಿಸುತ್ತಾ, ಸಹಕಾರ ಕ್ಷೇತ್ರದ ಈ ಸಂಸ್ಥೆಯು ಸಾಮಾಜಿಕ, ಆರ್ಥಿಕ ಹಾಗೂ ಮಹಿಳಾ ಸಬಲೀಕರಣದ ಮೂಲಕ ದೇಶದ ಯಶಸ್ವಿ ಹಾಗೂ ಉತ್ಪನ್ನ ಸಂಸ್ಥೆಯಾಗಿ ಹೊರಹೊಮ್ಮಿರುವುದನ್ನು ಸಭೆಗೆ ವಿವರಿಸಿದರು. ಈ ಸಂಸ್ಥೆ ಎತ್ತರಕ್ಕೆ ಬೆಳೆಯಲು ಸಹಕಾರ ತತ್ವ ಹಾಗೂ ಡಾ|| ವರ್ಗಿಸ್ ಕುರಿಯನ್ ರವರ ದಕ್ಷ ನಾಯಕತ್ವ ಕಾರಣವಾಗಿರುವುದನ್ನು ತಮ್ಮ ಉಪನ್ಯಾಸದಲ್ಲಿ ವಿವರಿಸುತ್ತಾ, ಈ ನಾಯಕತ್ವ ಗುಣಗಳು ಡಾ|| ವಿ.ಎಸ್.ಸೋಂದೆಯವರಲ್ಲಿ ತಾನು ಕಂಡಿರುವುದಾಗಿ ತಿಳಿಸಿದರು. ಈ ಕಾರಣದಿಂದ ಇಂದು ಶಿರಸಿ ಅರ್ಬನ್ ಬ್ಯಾಂಕ್ ಕೂಡ ರಾಜ್ಯದ ಯಶಸ್ವಿ ಬ್ಯಾಂಕಾಗಿ ಗುರುತಿಸಿಕೊಂಡಿದೆ ಎಂದು ತಿಳಿಸಿದರು.
ಇಂದು ನಮ್ಮ ದೇಶ ಹಾಲು ಉತ್ಪನ್ನಗಳನ್ನು ಹಾಗೂ ಸಕ್ಕರೆಯನ್ನು ರಪ್ತು ಮಾಡುವ ಮುಂಚುಣಿ ದೇಶವಾಗಲು ಈ ಕ್ಷೇತ್ರದಲ್ಲಿ ಸಹಕಾರಿಗಳು ಮಾಡಿರುವ ಮಹತ್ತರ ಸಾಧನೆಗಳು ಕಾರಣವಾಗಿವೆ. ಸಹಕಾರಿಗಳು ಬಯಸಿದಲ್ಲಿ ಈ ಕ್ಷೇತ್ರದಲ್ಲಿ ಮಾಡಿದ ಸಾಧನೆಯಂತೆ ಯಾವುದೇ ಕ್ಷೇತ್ರದಲ್ಲಿ ಬದಲಾವಣೆ ಹಾಗೂ ಬೆಳವಣಿಗೆಗೆ ಕಾರಣವಾಗಬಹುದಾಗಿದೆ. ದೇಶದ ಪ್ರಗತಿಗೆ ಸಹಕಾರ ರಂಗದ ಬೆಳವಣಿಗೆ ಅತೀ ಅವಶ್ಯಕವಾಗಿದ್ದು, ಸಹಕಾರಿಗಳು ಎಂದಿನ ಸಾಂಪ್ರದಾಯಿಕ ಕಾರ್ಯಗಳ ಜೊತೆಗೆ ಹೊಸ ಯೊಜನೆಗಳ ಮುಖಾಂತರ ಬದಲಾವಣೆ ತಂದು ಲಾಭದಾಯಕ ಸಂಸ್ಥೆಗಳಾಗಿ ಮುಂದುವರೆಯಬೇಕೆಂದು ಅವರು ಉಪನ್ಯಾಸ ಕಾರ್ಯಕ್ರಮದಲ್ಲಿ ವಿವರಿಸಿದರು.
ಸಹಕಾರಿಗಳಲ್ಲಿ ವೃತ್ತಿಪರ ಆಡಳಿತ, ಸಂಘಟನಾತ್ಮಕ ಕಾರ್ಯನಿರ್ವಹಣೆ, ದಕ್ಷ ನಿಸ್ವಾರ್ಥ ನಾಯಕತ್ವವನ್ನು ಹೊಂದಿದಲ್ಲಿ ಮಾತ್ರ ಸಹಕಾರ ಸಂಸ್ಥೆಗಳು ಅಭಿವೃದ್ಧಿ ಹೊಂದಿ, ತಮ್ಮ ಸದಸ್ಯರ ಹಾಗೂ ಸ್ಥಳೀಯ ಜನರ ಆರ್ಥಿಕ ಬೆಳವಣಿಗೆಗೆ ಕಾರಣವಾಗಬಹುದಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ಸುರೇಶ ಪ್ರಭು ಸಭೆಗೆ ತಿಳಿಸಿದರು.

ತಾವು ಕೇಂದ್ರ ಸರಕಾರದ ರಾಷ್ಟ್ರೀಯ ಸಹಕಾರ ನೀತಿ ಸಮಿತಿಯ ಅಧ್ಯಕ್ಷರಾಗಿದ್ದು, ಎಲ್ಲಾ ರಾಜ್ಯಗಳೊಂದಿಗೆ ಚರ್ಚಿಸಿ ಈಗಾಗಲೇ ಸಹಕಾರ ಕ್ಷೇತ್ರದ ಬದಲಾವಣೆಗಾಗಿ ಕರಡು ನೀತಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಿರುವುದನ್ನು ಈ ಸಂದರ್ಭದಲ್ಲಿ ಅವರು ತಿಳಿಸಿದರು. ಇದು ಮುಂದಿನ ದಿನಗಳಲ್ಲಿ ಸಹಕಾರ ಕ್ಷೇತ್ರದ ಮುಖಾಂತರ ದೇಶದ ಆರ್ಥಿಕ ಹಾಗೂ ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಬಹುದು ಎಂದು ತಿಳಿಸಿದರು.
ಸುರೇಶ ಪ್ರಭು ಸಾರಸ್ವತ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸಮಯದಲ್ಲಿ ಶಿರಸಿ ಅರ್ಬನ್ ಬ್ಯಾಂಕು ಹಾಗೂ ಡಾ|| ವಿ.ಎಸ್. ಸೋಂದೆಯೊಂದಿಗೆ ಹೊಂದಿದ್ದ ಮಧುರ ಸಂಬಂಧವನ್ನು ಹಾಗೂ 1999 ರಲ್ಲಿ ಬ್ಯಾಂಕಿನ ಬೆಂಗಳೂರು ಶಾಖೆಗಳ ಉದ್ಘಾಟನಾ ಸಮಾರಂಭದಲ್ಲಿ ತಾವು ಪಾಲ್ಗೊಂಡಿರುವುದನ್ನು ಈ ಸಂದರ್ಭದಲ್ಲಿ ಅವರು ಮೆಲಕು ಹಾಕುತ್ತಾ, ಬ್ಯಾಂಕು ವೃತ್ತಿಪರ ಆಡಳಿತ ಮಂಡಳಿ ಹಾಗೂ ಉದ್ಯೋಗಿಗಳನ್ನು ಹೊಂದಿದ್ದು, ಸೋಂದೆಯವರು ತೋರಿದ ಮಾರ್ಗದಶನದಲ್ಲಿ ಬ್ಯಾಂಕು ಮುಂದುವರೆದು ಯಶಸ್ವಿಯಾಗಲೆಂದು ಈ ಸಂದರ್ಭದಲ್ಲಿ ಹಾರೈಸಿದರು. ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡುವುದರ ಮೂಲಕ ತಾವು ಡಾ|| ವಿ.ಎಸ್.ಸೋಂದೆಯವರಿಗೆ ನಿಜವಾದ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಭಾಗವಹಿಸಿದ ಕೆಲವು ಪ್ರತಿನಿಧಿಗಳು ತಮ್ಮ ಸಂದೇಹಗಳಿಗೆ ಸುರೇಶ ಪ್ರಭುರವರಿಂದ ಸೂಕ್ತ ಉತ್ತರ ಪಡೆದುಕೊಂಡರು. ಡಾ|| ವಿ. ಎಸ್ ಸೋಂದೆ ಫೌಂಡೇಶನ್‌ನ ಟ್ರಸ್ಟಿಗಳಾದ ರಾಜೇಶ ಜಿ. ಧಾಕಪ್ಪ ಸರ್ವರಿಗೂ ವಂದನೆ ಸಲ್ಲಿಸಿದರು. ಸಭೆಯಲ್ಲಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರು ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಶ್ರೀಮತಿ ಆರತಿ ಶೆಟ್ಟರ್ ಹಾಗೂ ಡಾ|| ವಿ.ಎಸ್, ಸೋಂದೆ ಫೌಂಡೇಷನ್ ಟ್ರಸ್ಟಿಗಳಾದ ರಾಜೇಶ ಜಿ. ಧಾಕಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬ್ಯಾಂಕಿನ ನಿರ್ದೇಶಕರಾದ ಪ್ರೊ. ಕೆ. ಎನ್ ಹೊಸಮನಿ ನಿರ್ವಹಿಸಿದರು. ರಾಜ್ಯದ ಸಹಕಾರ ಬ್ಯಾಂಕುಗಳ ಪ್ರತಿನಿಧಿಗಳು, ಸ್ಥಳಿಯ ಆರ್ಥಿಕ ಸಂಸ್ಥೆಗಳ, ಬ್ಯಾಂಕುಗಳ, ಸಹಕಾರ ಸಂಘಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಸುಮಾರು 300 ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Share This
300x250 AD
300x250 AD
300x250 AD
Back to top