ಭಟ್ಕಳ: ಭಟ್ಕಳ ಸೆಂಟ್ರಿಂಗ್ ಕಾರ್ಮಿಕರ ಸಂಘದ ವತಿಯಿಂದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯರವರನ್ನು ಗುಳ್ಮಿಯಲ್ಲಿರುವ ಸಂಘದ (ಲ್ಯಾಂಪ್ಸ್ ಕಟ್ಟಡ) ಕಾರ್ಯಾಲಯದಲ್ಲಿ ಫಲಪುಷ್ಪ ನೀಡಿ, ಶಾಲು ಹೊದಿಸಿ, ನೆನಪಿನ ಕಾಣಿಕೆ ಕೊಟ್ಟು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಸ್ವಂತ ಕಟ್ಟಡಕ್ಕಾಗಿ ಒಂದು ಜಾಗ ಮಂಜೂರಿ ಮಾಡಿಕೊಡುವಂತೆ ಮನವಿ ಪತ್ರವನ್ನು ಸಂಘದ ವತಿಯಿಂದ ನೀಡಿ ವಿನಂತಿಸಲಾಯಿತು.
ಮನವಿ ಪತ್ರದಲ್ಲಿ, ‘ಮಾನ್ಯರೇ, ನಮ್ಮ ಭಟ್ಕಳ ಸೆಂಟ್ರಿಂಗ್ ಕಾರ್ಮಿಕರ ಸಂಘ ಕಳೆದ ಹನ್ನೆರಡು ವರ್ಷಗಳಿಂದ ಈ ತಾಲೂಕಿನಲ್ಲಿ ಅಸ್ತಿತ್ವದಲ್ಲಿದೆ ಹಾಗೂ ಸೆಂಟ್ರಿಂಗ್ ಕಾರ್ಮಿಕರನ್ನು ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದೆ. ಈ ತಾಲೂಕಿನ ಸೆಂಟ್ರಿಂಗ್ ಕಾರ್ಮಿಕರ ಅಳಲಿಗೆ ಸ್ಪಂದಿಸುತ್ತಾ ಬಂದಿದೆ. ಅಲ್ಲದೇ ಸೆಂಟ್ರಿಂಗ್ ಕಾರ್ಮಿಕರಿಗೆ ಏನಾದರೂ ಆರೋಗ್ಯದ ಏರುಪೇರಾದಲ್ಲಿ, ಅವರಿಗೆ ಅಥವಾ ಅವರ ಕುಟುಂಬಳಿಗೆ ಧನಸಹಾಯವನ್ನು ನೀಡುತ್ತಾ ಬಂದಿದೆ. ಸೆಂಟ್ರಿಂಗ್ ಕಾರ್ಮಿಕರಿಗೆ ಮನೆಯ ಮಾಲಿಕರು ಅಥವಾ ಗುತ್ತಿಗೆದಾರಿಂದ ಯಾವುದೇ ತರಹದ ದೌರ್ಜನ್ಯಗಳಾದರೂ ಸಹ ಸಂಘವು ಅದನ್ನು ಬಗೆಹರಿಸಿ ಕೊಟ್ಟಿದೆ. ನಿಜವಾದ ಕಟ್ಟಡ ಕಾರ್ಮಿಕರಿಗೆ ಆಗುತ್ತಿರುವ ವಂಚನೆಗಳ ವಿರುದ್ಧ ಧ್ವನಿ ಎತ್ತಿದೆ ಹಾಗೂ ಸರಕಾರದಿಂದ ಮತ್ತು ಕಾರ್ಮಿಕ ಇಲಾಖೆಯಿಂದ ಬರುವ ಸೌಲಭ್ಯಗಳಾದ ಕಾರ್ಮಿಕರ ಟೂಲ್ ಕಿಟ್, ಶಾಲಾ ಮಕ್ಕಳ ಕಿಟ್, ಮೆಡಿಕಲ್ ಕಿಟ್ ಇನ್ನೂ ಬಹಳಷ್ಟು ಸವಲತ್ತುಗಳನ್ನು ನಿಜವಾದ ಕಾರ್ಮಿಕರಿಗೆ ಒದಗಿಸುವಲ್ಲಿ ಯಶಸ್ವಿಯಾಗಿದೆ.
ಈ ಹನ್ನೆರಡು ವರ್ಷಗಳಲ್ಲಿ ಇಷ್ಟೆಲ್ಲಾ ಸಾಧನೆ ಮಾಡಿದರೂ ಸಹ ನಮ್ಮ ಸಂಘವು ತನ್ನ ಸ್ವಂತದ ಯಾವುದೇ ಆಸ್ತಿಯನ್ನು ಹೊಂದಿಲ್ಲ. ಇದರ ಬಗ್ಗೆ ಈ ಹಿಂದೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇಲ್ಲಿಯವರೆಗೂ ಕೂಡ ಬಾಡಿಗೆಯ ಕಟ್ಟಡಲ್ಲಿಯೇ ತನ್ನ ಕಾರ್ಯ ನಿರ್ವಹಿಸುತ್ತಿದೆ. ಹಾಗಾಗಿ ಈಗಲೂ ಕೂಡ ನಮ್ಮ ಸಂಘದ ಸದಸ್ಯರೆಲ್ಲರೂ ಒಮ್ಮನಸ್ಸಿನಿಂದ ಸಂಘದ ಒಂದು ಸ್ವಂತ ಅಧಿಕೃತ ಕಟ್ಟಡವನ್ನು ಹೊಂದಬೇಕೆನ್ನುವ ವಿಚಾರವನ್ನು ಮತ್ತೆ ಅಭಿವ್ಯಕ್ತಿಸಿದ್ದಾರೆ. ಅದಕ್ಕಾಗಿ ಸೂಕ್ತ ಜಾಗಗಳ ಹುಡುಕಾಟವನ್ನು ಮಾಡಿ ಎರಡು ಜಾಗಗಳನ್ನು ಗುರುತಿಸಿದ್ದಾರೆ.
ಆದ್ದರಿಂದ ನಮ್ಮ ಸಂಘದ ಅಧಿಕೃತ ಕಾರ್ಯಾಲಯದ ಕಟ್ಟಡಕ್ಕೆ ನಾಲ್ಕು ಗುಂಟೆ ಜಾಗವನ್ನು ನಗರದ ಹತ್ತಿರದ ಈ ಎರಡು ಜಾಗಗಳಲ್ಲಿಯೇ ಮಂಜೂರು ಮಾಡಿಸಿ ಕೊಡಬೇಕು’ ಎಂದು ವಿನಂತಿಸಲಾಗಿದೆ.
ಮನವಿಯನ್ನು ಆಲಿಸಿದ ಸಚಿವರು, ಆದಷ್ಟು ಶೀಘ್ರವಾಗಿ ಪರಿಶೀಲಿಸಿ ಜಾಗ ಒದಗಿಸುವ ಕೊಡುವ ಭರವಸೆ ನೀಡಿದರು.
ಸಂಘದ ಸಹ ಕಾರ್ಯದರ್ಶಿ ರಾಮ ಹೆಬಳೆ ಸ್ವಾಗತಿಸಿ, ಮನವಿ ಪತ್ರ ಓದಿ ವಂದಿಸಿದರು.ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷರಾದ ಕೇಶವ ಆಚಾರಿ, ಅಧ್ಯಕ್ಷರಾದ ಲೋಕೇಶ ನಾಯ್ಕ, ಉಪಾಧ್ಯಕ್ಷರಾದ ಸುಬ್ರಾಯ ನಾಯ್ಕ, ಪ್ರಧಾನ ಕಾರ್ಯದರ್ಶಿ ಶಿವರಾಮ ನಾಯ್ಕ, ಖಜಾಂಚಿ ಬಾಬು ನಾಯ್ಕ ಹಾಗೂ ಸಂಘದ ಇನ್ನಿತರ ಎಲ್ಲಾ ಪದಾಧಿಕಾರಿಗಳೂ ಕೂಡ ಹಾಜರಿದ್ದರು.