ಯಲ್ಲಾಪುರ: ಪಟ್ಟಣದ ಮಾಗೋಡ ಕ್ರಾಸ್‌ನಿಂದ ಉಪಳೇಶ್ವರ ಕ್ರಾಸ್‌ವರೆಗೆ ಹದಗೆಟ್ಟಿದ್ದ ಮಾಗೋಡ ರಸ್ತೆಗೆ ಲೋಕೋಪಯೋಗಿ ಇಲಾಖೆ ತೇಪೆ ಭಾಗ್ಯವನ್ನು ಕರುಣಿಸಿದೆ. ಕಳೆದ 3-4 ದಿನಗಳಿಂದ ರಸ್ತೆಯ ಹೊಂಡ ಮುಚ್ಚುವ ಕಾಮಗಾರಿ ಕಾಟಾಚಾರಕ್ಕೆಂಬಂತೆ ನಡೆಯುತ್ತಿದೆ.
ಉಪಳೇಶ್ವರ ಕ್ರಾಸ್‌ನಿಂದ ಮಾಗೋಡವರೆಗೂ ಕಳೆದ ಎರಡು ವರ್ಷಗಳ ಹಿಂದೆಯೇ ಸಂಪೂರ್ಣ ಡಾಂಬರೀಕರಣ ಮಾಡಲಾಗಿದೆ. ಆದರೆ ಮಾಗೋಡ ಕ್ರಾಸ್‌ನಿಂದ ಉಪಳೇಶ್ವರ ಕ್ರಾಸ್‌ವರೆಗಿನ 5 ಕಿಮೀ ರಸ್ತೆಗೆ ಮಾತ್ರ ಡಾಂಬರೀಕರಣ ಮಾಡಿಲ್ಲ. ಮಾಗೋಡ ರಸ್ತೆ ಪಟ್ಟಣದ ಮಾಗೋಡ ಕ್ರಾಸ್‌ನಿಂದ ಉಪಳೇಶ್ವರ ಕ್ರಾಸ್‌ವರೆಗೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಗಳ ನಡುವೆ ರಸ್ತೆಯನ್ನು ಹುಡುಕಬೇಕಾದ ಪರಿಸ್ಥಿತಿ ಇದೆ.
ಪ್ರತಿನಿತ್ಯ ಹೊರ ಊರುಗಳಿಂದ ಮಾಗೋಡ ಜಲಪಾತ, ಜೇನುಕಲ್ಲುಗುಡ್ಡ, ಚಂದಗುಳಿ ಘಂಟೆ ಗಣಪತಿ ದೇವಸ್ಥಾನ ಮುಂತಾದ ಸ್ಥಳಗಳಿಗೆ ಭೇಟಿ ನೀಡಲು ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಅವರೆಲ್ಲರೂ ಈ ಅವ್ಯವಸ್ಥೆಯನ್ನು ನೋಡಿ ಶಪಿಸುತ್ತ ಹೋಗುವಂತಾಗಿದೆ.
ಈ ಮಳೆಗಾಲದ ನಂತರವಾದರೂ ರಸ್ತೆಯ ಸುಧಾರಣೆಗೆ ಇಲಾಖೆ ಕ್ರಮ ಕೈಗೊಳ್ಳಬಹುದೆಂಬ ಸಾರ್ವಜನಿಕರ ನಿರೀಕ್ಷೆ ಹುಸಿಯಾಗಿದೆ. ಡಾಂಬರೀಕರಣದ ಬದಲು ಪ್ಯಾಚ್ ವರ್ಕ್‌ಗೆ ಇಲಾಖೆ ಮುಂದಾಗಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. ಕಾಮಗಾರಿ ಕಾಟಾಚಾರಕ್ಕೆಂಬಂತೆ ನಡೆಯುತ್ತಿದ್ದು, ಹೊಂಡಗಳಿಗೆ ಡಾಂಬರು ಹಾಕಿದ ಕೆಲವೇ ಗಂಟೆಗಳಲ್ಲಿ ಕಿತ್ತೆದ್ದು ಹೋಗುತ್ತಿದೆ. ಚುನಾವಣೆಗೂ ಮುನ್ನ ನೀಡಿದ ಭಾಗ್ಯಗಳ ಭರವಸೆಯನ್ನು ಈಡೇರಿಸುವುದಕ್ಕಾಗಿ ಹಣ ಹೊಂದಿಸಲಾಗದೇ ಪರದಾಡುತ್ತಿರುವ ಸರ್ಕಾರ, ರಸ್ತೆಗಳ ಅಭಿವೃದ್ಧಿಗೆ ಅನುದಾನ ಎಲ್ಲಿಂದ ನೀಡಲು ಸಾಧ್ಯ ಎಂಬ ಪ್ರಶ್ನೆ ಸಹಜವಾಗಿ ಮೂಡುವಂತಾಗಿದೆ.
ಪ್ರವಾಸೀ ತಾಣದ ರಸ್ತೆಯ ಅಭಿವೃದ್ಧಿಗೆ ಇಲ್ಲಿನ ಆಡಳಿತ, ಜನಪ್ರತಿನಿಧಿಗಳು ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಆದರೆ ಅವರು ಕಣ್ಣುಮುಚ್ಚಿ ಕುಳಿತಿರುವುದು ರಸ್ತೆಯ ಅವ್ಯವಸ್ಥೆಯನ್ನು ನೋಡಿದಾಗ ಸ್ಪಷ್ಟವಾಗುತ್ತದೆ. – ರವೀಂದ್ರ ಕಾಂಬಳೆ, ಧಾರವಾಡ, ಪ್ರವಾಸಿಗ
ಕಾಟಾಚಾರದ ಪ್ಯಾಚ್ ವರ್ಕ್ ಮಾಡುವುದಕ್ಕಿಂತ ಡಾಂಬರೀಕರಣ ಮಾಡುವ ಕುರಿತು ಗಂಭೀರವಾಗಿ ಕ್ರಮ ಆಗಬೇಕು. ಈ ರೀತಿ ತೇಪೆ ಹಾಕಿ ಜನರ ಕಣ್ಣೊರೆಸುವ ತಂತ್ರ ಸರಿಯಲ್ಲ. ಗುರುಪ್ರಸಾದ ಭಟ್ಟ, ಸ್ಥಳೀಯರು