ದಾಂಡೇಲಿ: ಅಸ್ಪಷ್ಟವಾಗಿ ಮಾತನಾಡುವ ಸರಿ ಸುಮಾರು 70 ವರ್ಷ ದಾಟಿದ ವೃದ್ಧೆಯನ್ನು ದಾಂಡೇಲಿ ನಗರದ ಹಳಿಯಾಳ ರಸ್ತೆಯಲ್ಲಿರುವ 3 ನಂಬರ್ ಗೇಟ್ ಪ್ರದೇಶ ವ್ಯಾಪ್ತಿಯಲ್ಲಿರುವ ಶ್ರೀ ಮಾರುತಿ ಮಂದಿರದ ಆವರಣದಲ್ಲಿ ಪಟ್ಟಣದಲ್ಲಿ ಬಿಟ್ಟುಹೋದ ಘಟನೆ ನಡೆದಿದೆ. ವೃದ್ಧೆಯ ಅಸ್ಪಷ್ಟ ಮಾತಿನಿಂದಾಗಿ ಅವರ ಹೆಸರು, ಊರು ಯಾವುದೆಂದು ಇನ್ನೂ ನಿಖರವಾಗಿ ತಿಳಿದಿಲ್ಲ. ಈ ವೃದ್ಧೆ ಯಾರೆಂದು ಗೊತ್ತಿಲ್ಲದೇ ಇದ್ದರೂ ಸ್ಥಳೀಯ ಜನತೆ ಪ್ರತಿ ನಿತ್ಯ ಊಟೋಪಚಾರವನ್ನು ನೀಡುವ ಮೂಲಕ ಆರೈಕೆ ಮಾಡಿ ಮಾನವೀಯತೆಯನ್ನು ಮೆರೆಯುತ್ತಿದ್ದಾರೆ.
ಮರಾಠಿ ಮತ್ತು ಕೊಂಕಣಿ ಮಾತನಾಡುವ ಈ ವೃದ್ಧೆ ಲೋಂಡಾ ವ್ಯಾಪ್ತಿಯ ನಿವಾಸಿ ಎನ್ನುತ್ತಿದ್ದಾರೆ ಸ್ಥಳೀಯರು. ಈ ಅಜ್ಜಿ ಹೇಳಿದ ಪ್ರಕಾರ ಮಗ ರಾಮದಾಸ ಎಂಬಾತನು ಅಜ್ಜಿಯನ್ನು ಇಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಅಜ್ಜಿ ಹೇಳಿರುವುದನ್ನು ಮಾಧ್ಯಮಕ್ಕೆ ತಿಳಿಸಿದ್ದಾರೆ.
ವಯೋವೃದ್ಧೆಯಾಗಿರುವ ಹಿನ್ನೆಲೆಯಲ್ಲಿ ಆರೋಗ್ಯದಲ್ಲಿಯೂ ಕೂಡ ಏರುಪೇರಾಗಿದೆ. ಈ ನಿಟ್ಟಿನಲ್ಲಿ ಈ ಕೂಡಲೇ ಈ ವೃದ್ಧೆಯ ಕುಟುಂಬಸ್ಥರು ಎಲ್ಲಿದ್ದರೂ ಕೂಡ ಬಂದು ವೃದ್ಧೆಯನ್ನು ಕರೆದುಕೊಂಡು ಹೋಗುವಂತೆ ಸ್ಥಳೀಯರು ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ.