ಭಟ್ಕಳ: ನದಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ಕಾರ್ಯವನ್ನು ಮಣ್ಣುಳಿಯ ಗ್ರಾಮಸ್ಥರು ಸತತ 5 ವರ್ಷಗಳಿಂದ ಮಾಡಿಕೊಂಡು ಬಂದಿದ್ದು, ಅದರಂತೆ ಈ ವರ್ಷವೂ ಕೂಡ ನದಿಗೆ ಅಡ್ಡವಾಗಿ ಒಡ್ಡನ್ನು
ನಿರ್ಮಿಸುವ ಮೂಲಕ ಶ್ರಮದಾನ ಮಾಡಿದರು.
ಇದರಿಂದ ಬಾವಿಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿ ಬೇಸಿಗೆಯಲ್ಲಿ ಸುತ್ತ ಮುತ್ತಲ ನಿವಾಸಿಗಳ ಕುಡಿಯುವ ನೀರಿನ ಬವಣೆ ಸ್ವಲ್ಪ ಮಟ್ಟಿಗೆ ನೀಗುವಂತಾಗುತ್ತದೆ. ತಲಾಂದ ಗ್ರಾಮದಿಂದ ಹರಿದು ಬಂದು ಮುಟ್ಟಳ್ಳಿಯ ಮೂಲಕ ಚೌಥನಿ ಶರಾಬಿ ನದಿಗೆ ನಾಗಮಾಸ್ತಿ ಹೊಳೆ ಸೇರುತ್ತದೆ. ಈ ಭಾಗದಲ್ಲಿ ಬೇಸಿಗೆಯಲ್ಲೂ ಅಂತರ್ಜಲ ಮಟ್ಟ ಕುಸಿಯುತ್ತಿರಲಿಲ್ಲ. ಎಂದೂ ಕುಡಿಯುವ ನೀರಿನ ಕೊರತೆ ಕಾಡಿರಲಿಲ್ಲ. ಆದರೆ, ಕೆಲವು ವರ್ಷಗಳ ಹಿಂದೆ ಇಲ್ಲಿನ ಬಾವಿಗಳಲ್ಲಿ ನೀರಿನ ಮಟ್ಟ ದಿಢೀರ್ ಕುಸಿತವಾಗಿತ್ತು. ಹಾಗಾಗಿ ಜನ ನೀರಿಗಾಗಿ ಪರದಾಡುವಂತಾಗಿತ್ತು. ಸಮಸ್ಯೆಯ ಗಂಭೀರತೆ ಅರಿತ ಊರಿನ ಹಿರಿಯರು ಸಭೆ ಸೇರಿ, ಅಂತರ್ಜಲ ಮಟ್ಟ ಕುಸಿತದ ಕಾರಣ ಹುಡುಕಲು ಹೊರಟರು. ಆಗ ಬೇಸಿಗೆಯಲ್ಲಿ ನದಿಯಲ್ಲಿ ನೀರು ನಿಲ್ಲದೇ ಹರಿದು ಹೋಗುತ್ತಿರುವುದನ್ನು ಗಮನಿಸಿದರು. ತಕ್ಷಣ ಕಾರ್ಯಪ್ರವೃತ್ತರಾದ ಊರಿನ ಹಿರಿಯ ಮುಖಂಡರು ಸರ್ಕಾರದ ನೆರವಿಗೆ ಕಾಯದೇ ತಾವೇ ನದಿಗೆ ಒಡ್ಡು ನಿರ್ಮಿಸಿ ನೀರು ನಿಲ್ಲುವಂತೆ ಮಾಡಿದ್ದಾರೆ.
ಈ ಹಿಂದೆ ತಾಲ್ಲೂಕಿನಲ್ಲಿ ಭತ್ತದ ಕೊಯ್ಲಿನ ನಂತರ ಕೃಷಿ ಭೂಮಿಗಳಲ್ಲಿ ಶೇಂಗಾ, ಉದ್ದು ಸೇರಿದಂತೆ ದ್ವಿದಳ ಧಾನ್ಯಗಳನ್ನು ಬಿತ್ತುತ್ತಿದ್ದರು. ಆಗ ಕೃಷಿಯ ಸಲುವಾಗಿ ನದಿಗೆ ಅಡ್ಡಲಾಗಿ ಒಡ್ಡು ನಿರ್ಮಿಸಿ ಗದ್ದೆಗೆ ನೀರು ಹರಿಸುತ್ತಿದ್ದರು. ಇದರಿಂದ ಅಂತರ್ಜಲ ಮಟ್ಟ ಏರಿಕೆಯಾಗುತ್ತಿತ್ತು. ಈಗ ಬಹುತೇಕ ಕೃಷಿ ಭೂಮಿಗಳಲ್ಲಿ ಮಳೆಗಾಲ ಭತ್ತದ ಬೇಸಾಯ ಮಾಡಿ ಬೇಸಿಗೆಯಲ್ಲಿ ಪಾಳು ಬಿಡಲಾಗುತ್ತದೆ. ಹಾಗಾಗಿ ನದಿಗೆ ಒಡ್ಡು ಕಟ್ಟುವುದೂ ನಿಂತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಡ್ಯಾಂಗೆ ಸಿಮೆಂಟ್ ಚೀಲದಲ್ಲಿ ಮಣ್ಣು ತುಂಬಿಸಿ ನೀರು ಸಂಗ್ರಹಣೆಯ ಪೂರ್ವಭಾವಿ ಕಾರ್ಯವನ್ನು ಮಾಡಿದರು. ಮಣ್ಣುಳಿ, ಮಾರುತಿನಗರದ ನಿವಾಸಿಗಳ ಯಶಸ್ಸಿನಿಂದ ಚೌಥನಿ ಸೇರಿದಂತೆ ಹಲವು ಭಾಗಗಳಲ್ಲೂ ಜನ ಪ್ರೇರಿತರಾಗಿದ್ದಾರೆ. ಪ್ರತಿವರ್ಷ ಡಿಸೆಂಬರ್, ಜನವರಿಯಲ್ಲಿ ಒಡ್ಡು ನಿರ್ಮಿಸುತ್ತಿದ್ದಾರೆ. ತಮ್ಮ ಭಾಗದಲ್ಲಿ ನೀರಿನ ಕೊರತೆ ನೀಗಿಸಿಕೊಳ್ಳುತ್ತಿದ್ದಾರೆ. ಸದ್ಯ ನಬಾರ್ಡ್ ಯೋಜನೆಯಲ್ಲಿ ಹಣ ಮಂಜೂರಾಗಿ ಟೆಂಡರ್ ಹಂತದಲ್ಲಿದ್ದು, ಟೆಂಡರ್ ಮುಗಿದ ಬಳಿಕ ಕಾಮಗಾರಿ ನಡೆಯಲಿದೆ. ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು