ಹೊನ್ನಾವರ: ತಾಲೂಕಿನ ಅರೇಅಂಗಡಿಯ ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಮಹಾದ್ವಾರದ ಮುಂಭಾಗದಲ್ಲಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ದ್ವೀಪ ಪ್ರಜ್ವಲನೆ ಕಾರ್ಯಕ್ರಮ ಮಂಗಳವಾರ ಸಂಪನ್ನಗೊಂಡಿತು.
ಅರೇಅಂಗಡಿ ಯುವ ಬಳಗದವರು ಕಾರ್ತಿಕ ಮಾಸದ ಅಂಗವಾಗಿ ಹಮ್ಮಿಕೊಂಡ ಈ ದೀಪ ಪ್ರಜ್ವಲನೆ ಕಾರ್ಯಕ್ರಮ ಪ್ರತಿನಿತ್ಯ ದಾನಿಗಳ ಸಹಕಾರದ ಮೇರೆಗೆ ನಡೆಯುತ್ತಾ ಅಮವಾಸ್ಯೆ ದಿನದಂದು 1008ಕ್ಕೂ ಅಧಿಕ ಮಣ್ಣಿನ ಹಣತೆ ದ್ವೀಪ ಪ್ರಜ್ವಲಿಸಿದರು. ದೇಶ ಸೇವೆಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅರೇಅಂಗಡಿಯ ಗಜಾನನ ನಾಯ್ಕ ಇವರಿಂದ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಗ್ರಾಮದ ಮಹಿಳೆಯರು, ಮಕ್ಕಳು, ಯುವ ಸಮುದಾಯ ಈ ಕಾರ್ಯದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು. ಪ್ರಸನ್ನ ಗೋಡಾಮಕ್ಕಿ ಇವರಿಂದ ರಚಿತವಾದ ಓಂ ಮಾದರಿಯ ರಂಗೋಲಿಯಲ್ಲಿ ಮೂಡಿಬಂದ ದೀಪ ಎಲ್ಲರನ್ನು ಆಕರ್ಷಿಸಿತು.
ಶ್ರೀ ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾದ ವೇ. ಸುಬ್ರಹ್ಮಣ್ಯ ಭಟ್ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಇದೇ ವೇಳೆ ಯುವ ಬ್ರೀಗೇಡ್ ವತಿಯಿಂದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಂದಿರದ ಇತಿಹಾಸ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮದ ಕುರಿತು ವಿಡಿಯೋ ಕ್ಲಿಪ್ ಪ್ರಾಜೆಕ್ಟರ್ ಮೂಲಕ ಪ್ರದರ್ಶಿಸಿಸಲಾಯಿತು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ರಾಜು ಶೆಟ್ಟಿ ಬಾಳೆಗದ್ದೆ, ಉಪನ್ಯಾಸಕರಾದ ಎಸ್.ಎಸ್.ಶಿವಪ್ಪ, ಶಂಕರ ಗೌಡ ಗುಣವಂತೆ, ವಕೀಲರಾದ ಎಸ್.ಜಿ.ಹೆಗಡೆ ದುಗ್ಗೂರು, ಎಸ್.ಕೆ.ಪಿ.ಪ್ರೌಡಶಾಲಾ ವಿಭಾಗದ ಪ್ರಾಚಾರ್ಯರಾದ ಪ್ರಕಾಶ, ಗ್ರಾ.ಪಂ.ಅಧ್ಯಕ್ಷೆ ಯಮುನಾ ನಾಯ್ಕ, ಗ್ರಾ.ಪಂ.ಸದಸ್ಯರಾದ ರಜನಿ ನಾಯ್ಕ, ಗಣಪತಿ ಭಟ್, ಸಚೀನ ನಾಯ್ಕ, ಗಣಪತಿ ನಾಯ್ಕ ಬಿ.ಟಿ, ನುಡಿಹಬ್ಬ ಸಮಿತಿ ಸದಸ್ಯರು, ಪ್ರೇರಣಾ ಪೌಂಡೇಶನ್ ಸದಸ್ಯರು ಹಾಗೂ ಶ್ರೀ ಕರಿಕಾನಮ್ಮ ಟ್ರಸ್ಟ ಸದಸ್ಯರು, ಸಾರ್ವಜನಿಕರು ಹಾಜರಿದ್ದರು.