ಹೊನ್ನಾವರ : ವಿಶ್ವಕರ್ಮ ಸಮಾಜ ಸೇವಾ ಸಂಘ ಉತ್ತರ ಕನ್ನಡ ವತಿಯಿಂದ ಬುಧವಾರ ಶ್ರೀ ಕಾಳಿಕಾಂಬಾ ಕಮಠೇಶ್ವರ ದೇವಸ್ಥಾನ ಗೋಕರ್ಣದಲ್ಲಿ ಕಾರ್ತಿಕೋತ್ಸವ ಸಲುವಾಗಿ ಭಜನಾ ಕಾರ್ಯಕ್ರಮ ನಡೆಯಿತು.
ಭಜನಾ ಕಾರ್ಯಕ್ರಮದಲ್ಲಿ ಶ್ರೀನಿವಾಸ ಆಚಾರ್ಯ ಬಳಕೂರು ಹಾರ್ಮೋನಿಯಂ, ಸುಬ್ರಾಯ ಆಚಾರ್ಯ ಗುಣವಂತೆ ತಬಲಾ ಸಾಥ್ ನೀಡಿದರು. ಶ್ರೀಧರ ಪೈ ಬಳ್ಕೂರು, ವೆಂಕಟೇಶ ಪೈ ಮಣ್ಣಿಗೆ, ವಿಷ್ಣು ಆಚಾರ್ಯ ಖರ್ವಾ, ಕಮಲಾಕರ ಆಚಾರ್ಯ ಅಗ್ರಹಾರ, ಕು. ಪೂರ್ವಿ ಆಚಾರ್ಯ ಮೂರೂರು, ರಾಮಚಂದ್ರ ಆಚಾರ್ಯ ಭಟ್ಕಳ ಇವರು ವಿವಿಧ ಭಜನೆಗಳನ್ನು ಭಕ್ತಿಪೂರ್ವಕವಾಗಿ ಹಾಡಿದರು. ಕಾರ್ಯಕ್ರಮ ಜನಮೆಚ್ಚುಗೆಗೆ ಪಾತ್ರವಾಯಿತು. ಭಜನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಗೌರವಿಸಲಾಯಿತು.
ಕಾರ್ತಿಕೋತ್ಸವ ನಿಮಿತ್ತ ಕಾಳಿಕಾಂಬಾ ಕಮಠೇಶ್ವರ ದೇವರಿಗೆ ಆಡಳಿತ ಮಂಡಳಿ ಮತ್ತು ಸರ್ವ ವಿಶ್ವಕರ್ಮರ ವತಿಯಿಂದ ದೀಪ ಬೆಳಗಿಸಿ, ರುದ್ರಾಭಿಷೇಕ, ಲಲಿತಾ ಸಹಸ್ರ ನಾಮದೊಂದಿಗೆ ರಂಗಪೂಜೆ, ಮಹಾಪೂಜೆ ನೇರವೇರಿಸಲಾಯಿತು. ಪ್ರಸಾದ ವಿತರಣೆ ನಂತರ ಅನ್ನ ಸಂತರ್ಪಣೆ ನಡೆಯಿತು. ವಿಶ್ವಕರ್ಮ ಸಮಾಜ ಸೇವಾ ಸಂಘದ ಸರ್ವಸದಸ್ಯರು ಭಾಗವಹಿಸಿ ಸಹಕರಿಸಿದರು.
ಸಂಘದ ಜಿಲ್ಲಾ ಅಧ್ಯಕ್ಷರಾದ ಆನಂದ ಜಿ. ಆಚಾರ್ಯ ಮಾತನಾಡಿ ಕಾರ್ತಿಕೋತ್ಸವ ಮತ್ತು ದೇವರ ಭಜನೆ ಹಾಡುವ ಮಹತ್ವ ತಿಳಿಸಿ ಎಲ್ಲರನ್ನು ಸ್ವಾಗತಿಸಿ, ವಂದಿಸಿದರು.