ಶಿರಸಿ: ಚಿಕ್ಕಮಂಗಳೂರಿನ ವಕೀಲ ಪ್ರೀತಮ ಎನ್.ಟಿ. ಮೇಲೆ ನ.30 ರಂದು ಪಿ.ಎಸ್.ಐ ಮಹೇಶ ಪುಜೇರಿ ಹಾಗೂ ಅವರ ಸಹಚರ ಸಿಬ್ಬಂದಿಗಳು ನಡೆಸಿದ ಮಾರಣಾಂತಿಕ ಹಲ್ಲೆ ಖಂಡಿಸಿ, ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆಗ್ರಹಿಸಿ, ಶಿರಸಿ ವಕೀಲರ ಸಂಘದ ವತಿಯಿಂದ ಶನಿವಾರ ಉಪವಿಭಾಗಾಧಿಕಾರಿ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಚಿಕ್ಕಮಂಗಳೂರಿನ ವಕೀಲರಾದ ಪೀತಮ ಎನ್.ಟಿ, ಇವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪಿ.ಎಸ್.ಐ. ಮಹೇಶ ಪುಜೇರಿ ಹಾಗೂ ಅವರ ಸಹಚರ ಸಿಬ್ಬಂದಿಗಳ ವರ್ತನೆಯನ್ನು ಶಿರಸಿ ವಕೀಲರ ಸಂಘವು ಉಗ್ರವಾಗಿ ಖಂಡಿಸುತ್ತದೆ. ಕಾನೂನಿನ ಅಡಿಯಲ್ಲಿ ಕಾರ್ಯನಿರ್ವಹಿಸುವ ವಕೀಲರಿಗೆ ಸಮಾಜದಲ್ಲಿ ರಕ್ಷಣೆ ಇಲ್ಲದಂತಾಗಿದೆ. ನ್ಯಾಯಾಲಯದಲ್ಲಿ ಕಕ್ಷಿದಾರರ ಪರವಾಗಿ ನ್ಯಾಯಕ್ಕಾಗಿ ಕರ್ತವ್ಯ ನಿರ್ವಹಿಸುವ ವಕೀಲರ ಮೇಲೆ ಅಧಿಕಾರಿಗಳು ದರ್ಪ ತೋರಿಸಿ, ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿರುವುದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿದೆ.
ಈ ಕೃತ್ಯದಿಂದ ಸಾರ್ವಜನಿಕರಿಗೆ ಪೋಲಿಸ್ ಇಲಾಖೆ ಮೇಲಿನ ವಿಶ್ವಾಸಕ್ಕೆ ಕುಂದು ಬಂದಿದೆ. ಆದ್ದರಿಂದ ರಾಜ್ಯ ಸರ್ಕಾರವು ಒಂದು ವಾರದೊಳಗೆ ಚಿಕ್ಕಮಂಗಳೂರಿನ ವಕೀಲರ ಮೇಲೆ ಹಲ್ಲೆ ನಡೆಸಿದ ಪಿ.ಎಸ್.ಐ. ಮಹೇಶ ಪುಜೇರಿ ಹಾಗೂ ಅವರ ಸಹಚರ ಸಿಬ್ಬಂದಿಗಳ ಮೇಲೆ ಜುಡಿಸಿಯಲ್ ತನಿಖೆ ನಡೆಸಿ, ಸೇವೆಯಿಂದ ವಜಾಗೋಳಿಸಬೇಕು ಹಾಗೂ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಕೂಡಲೇ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಈರೇಶ, ಸದಸ್ಯರಾದ ಶ್ರೀಪಾದ ನಾಯ್ಕ ಸೇರಿದಂತೆ ಹಲವರಿದ್ದರು.