ಜಿಲ್ಲೆಯ ಎಲ್ಲ ಕಾಲುಸಂಕ ಸಮಸ್ಯೆಗೆ 2 ವರ್ಷದಲ್ಲಿ ಮುಕ್ತಿ
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಎಲ್ಲ ಕಾಲುಸಂಕಗಳ ಸಮಸ್ಯೆಗೆ ಮುಂದಿನ ಎರಡು ವರ್ಷಗಳಲ್ಲಿ ಸಂಪೂರ್ಣ ಮುಕ್ತಿ ದೊರೆಯಲಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಶನಿವಾರ ತಾಲೂಕಿನ ಶಿವಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಹೆಗ್ಗಾರ ಗ್ರಾಮದಲ್ಲಿ ಗ್ರಾಮಬಂಧ ಸೇತುವೆ ನಿರ್ಮಾಣ ಅಡಿಯಲ್ಲಿ ನೂತನವಾಗಿ ನಿರ್ಮಿಸಲಾದ ಕಾಲುಸಂಕ ಉದ್ಘಾಟನೆ ಹಾಗೂ ರಾಜ್ಯದ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಸುರಕ್ಷಿತ ಸಂಚಾರಕ್ಕಾಗಿ 100 ಕಾಲು ಸಂಕಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ, ಅವರು ಮಾತನಾಡಿದರು. ರಾಜ್ಯದಲ್ಲಿಯೇ ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದ್ದು, ರಾಜ್ಯದ ಒಟ್ಟೂ 12 ಜಿಲ್ಲೆಗಳಲ್ಲಿ ಕಾಲು ಸಂಕಗಳು ನಿರ್ಮಾಣವಾಗುತ್ತಿದ್ದು, ಉ.ಕ ಜಿಲ್ಲೆಗೆ 28 ಕಾಲು ಸಂಕವನ್ನು ಮಂಜೂರಿ ಮಾಡಲಾಗಿದೆ ಎಂದು ತಿಳಿಸಿದರು.
ಇಂತಹ ಕಾಲು ಸಂಕಗಳ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಬಹಳಷ್ಟು ಅನುಕೂಲವಾಗಲಿದ್ದು, ಈಗಾಗಲೇ ಹಲವು ಕಡೆ ಕಾಲು ಸಂಕದ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಮುಂದಿನ ಮಳೆಗಾಲದೊಳಗೆ ಎಲ್ಲ ಕಾಲುಸಂಕದ ಕಾಮಗಾರಿ ಮುಗಿಸುವ ನಿರೀಕ್ಷೆ ಹೊಂದಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೂ ಈ ಬಗ್ಗೆ ಸೂಚಿಸಲಾಗಿದೆ ಎಂದರು.
ಉತ್ತರ ಕನ್ನಡ ಜಿಲ್ಲೇಯ ಅಭಿವೃದ್ಧಿ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದು, ಇಲ್ಲಿನ ಎಲ್ಲ ಸಮಸ್ಯೆಗಳಿಗೆ ನಮ್ಮ ಸರ್ಕಾರ ಸ್ಪಂದಿಸಲಿದೆ. ರಸ್ತೆ ನಿರ್ಮಿಸಿದ ಗುತ್ತಿಗೆದಾರರೇ ಮುಂದಿನ ಐದು ವರ್ಷಗಳವರೆಗೆ ಆ ರಸ್ತೆ ನಿರ್ವಹಣೆ ಮಾಡುವಂತಹ ಹೊಸ ಯೋಜನೆ ರೂಪಿಸಿದ್ದೇವೆ. ರಸ್ತೆ ರಕ್ಷಣೆಗಾಗಿ ಮೈಲುಗೂಲಿಗಳನ್ನು ತರಲು ಚಿಂತನೆ ನಡೆಸಲಾಗಿದೆ. ಇದರಿಂದ ಕಳಪೆ ರಸ್ತೆ ಕಾಮಗಾರಿ ತಡೆಯಲು ಸಹಕಾರಿಯಾಗಲಿದೆ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿಗಳಿಗೂ, ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರ ಹೆಚ್ಚು ಕಾಮಗಾರಿಗಳನ್ನು ನೀಡಿರುವುದರಿಂದ ಲೋಕೋಪಯೋಗಿ ಇಲಾಖೆಯ ಕೆಲವು ಬಿಲ್ ಪಾವತಿಗೆ ವಿಳಂಬವಾಗುತ್ತಿದೆ. ಶೀಘ್ರದಲ್ಲೇ ಬಿಲ್‌ಗಳನ್ನು ಪಾವತಿ ಮಾಡಲಾಗುವುದು ಎಂದ ಅವರು, ಕಾಲಮಿತಿಯಲ್ಲಿ ಎಲ್ಲ ಕಾಮಗಾರಿಗಳನ್ನು ಹಂತ ಹಂತವಾಗಿ ಮುಗಿಸುತ್ತೇವೆ. ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ,
100 ಕಾಲು ಸಂಕಗಳಲ್ಲಿ 21ಕಾಲು ಕಾಲುಸಂಕಗಳನ್ನು ನಮ್ಮ ಜಿಲ್ಲೆಗೆ ನೀಡಿರುವುದು ಅಭಿನಂದನಾರ್ಹ. ಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ಈ ಕಾಮಗಾರಿಗಳನ್ನು ನಡೆಸಲಾಗುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಶಿಕ್ಷಣ ಉತ್ತೇಜನಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಅಭಿವೃದ್ಧಿ ದೃಷ್ಟಿಯಿಂದ ಹಿಂದುಳಿದ ಜಿಲ್ಲೆಯಾದ ಉತ್ತರ ಕನ್ನಡ ಜಿಲ್ಲೆಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೆಚ್ಚಿನ ಅನುದಾನ ಒದಗಿಸಬೇಕು. ಆ ಮೂಲಕ ಜಿಲ್ಲೆ ಅಭಿವೃದ್ಧಿ ಹೊಂದಬೇಕು ಎಂದು ಸಚಿವ ಜಾರಕಿಹೊಳಿ ಬಳಿ ವಿನಂತಿಸಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಈ ಭಾಗದಲ್ಲಿ ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವುದರಿಂದ ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿತ್ತು. ಅಲ್ಲದೇ, ಅನೆಕ ಅವಘಡಗಳೂ ಸಂಭವಿಸಿದ್ದವು. ಕಾಲುಸಂಕ ನಿರ್ಮಾಣದಿಂದ ನೂರಾರು ಗ್ರಾಮದ ಜನತೆಗೆ ಅನುಕೂಲವಾಗಿದೆ. ರಾಜ್ಯ ಕಾಮಗಾರಿಗಳ ಶಂಕುಸ್ಥಾಪನೆಯ ಕಾರ್ಯಕ್ರಮವನ್ನು ನಮ್ಮ ಭಾಗದಲ್ಲಿ ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದರು.
ಗುಡ್ಡಗಾಡು ಪ್ರದೇಶದ ನಮ್ಮ ಜಿಲ್ಲೆಯಲ್ಲಿ ಇನ್ನೂ ಅನೇಕ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ. ರಾಜ್ಯ ಸರ್ಕಾರ ಹಾಗೂ ನಮ್ಮ ಉಸ್ತುವಾರಿ ಮಂತ್ರಿಗಳು ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಜಿಲ್ಲೆಯ ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಾಲೆ, ರಸ್ತೆ, ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸುವಂತೆ ಸಚಿವರ ಬಳಿ ವಿನಂತಿಸಿದರು.
ಕಾರ್ಯಕ್ರಮದಲ್ಲಿ ಕಾರವಾರ ಶಾಸಕ ಸತೀಶ ಸೈಲ್, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ಹೆಚ್.ಸುರೇಶ, ಸಂಜೀವ ಕುಮಾರ, ಡಿಡಿಪಿಐ. ಪಿ. ಬಸವರಾಜ, ಶಿವಳ್ಳಿ ಗ್ರಾ.ಪಂ ಅಧ್ಯಕ್ಷೆ ರೇಣುಕಾ ಗಣಪತಿ ಹರಿಜನ ಸೇರಿದಂತೆ ಹಲವು ಮುಖಂಡರು ಹಾಗೂ ವಿವಿಧ ಭಾಗದ ಸಾರ್ವಜನಿಕರಿದ್ದರು.