ಶಿರಸಿ: ದೈನಂದಿನ ವ್ಯವಹಾರದ ಜೊತೆಗೆ ಸಮಗ್ರ ಕೃಷಿ ಹಾಗೂ ತೋಟಗಾರಿಕೆಯತ್ತ ಯುವ ಪೀಳಿಗೆ ಇನ್ನಷ್ಟು ಆಸಕ್ತಿ ವಹಿಸಬೇಕಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಶನಿವಾರ ನಗರದ ಎಪಿಎಮ್‌ಸಿ ಮಾರುಕಟ್ಟೆಯಲ್ಲಿನ ಕದಂಬ ಮಾರ್ಕೆಟಿಂಗ್‌ನಲ್ಲಿ ಆಯೋಜಿಸಿದ ಎರಡು ದಿನಗಳ ಮಲೆನಾಡು ಸಾವಯವ ಕೃಷಿ-ತೋಟಗಾರಿಕಾ ಜೀವ ವೈವಿಧ್ಯ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿಕರು ಅನುಸರಿಸಿಕೊಂಡು ಬಂದಿರುವ ಆಹಾರ ವೈವಿಧ್ಯತೆ, ಜೀವ ವೈವಿಧ್ಯತೆಯನ್ನು ಕಾಪಾಡಿ, ಬೆಳೆಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಸ್ಥಳೀಯವಾಗಿ ದೊರಕುವ ತೋಟಗಾರಿಕೆ, ಕೃಷಿ ಬೆಳೆಗಳನ್ನು ಹೆಚ್ಚೆಚ್ಚು ಬಳಸಿ, ನಾಡಿನೆಲ್ಲೆಡೆ ಪಸರಿಸುವ ಕಾರ್ಯವಾಗಬೇಕು ಎಂದರು.
ಯುವ ಪೀಳಿಗೆ ದೈನಂದಿನ ವ್ಯವಹಾರದ ಜತೆಗೆ, ಕೃಷಿಯೆಡೆಗೆ ಹೆಚ್ಚೆಚ್ಚು ತೊಡಗಿಕೊಳ್ಳಬೇಕು. ಆರ್ಥಿಕ ಸಂಪತ್ತಿನ ಕ್ರೋಡೀಕರಣದ ಜೊತೆಗೆ ಕೃಷಿಯ ಕುರಿತು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೇಂದ್ರ ಸರ್ಕಾರದ ಜೀವವೈವಿಧ್ಯ ಮಂಡಳಿ ಸದಸ್ಯ ಅನಂತ ಅಶೀಸರ ಮಾತನಾಡಿ, ಕಂಚಿ, ಲಿಂಬು, ಕಿತ್ತಲೆ ಸೇರಿದಂತೆ ಇನ್ನಿತರ ಈ ಜಾತಿಯ ಸಸ್ಯಗಳನ್ನು ನಮ್ಮ ಭಾಗದ ಹೆಚ್ಚು ರೈತರು ಬೆಳೆಯುವಂತಾಗಬೇಕು ಎಂದರು.
ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ, ಕೃಷಿಯೆನ್ನುವುದು ಹತ್ತು ತಲೆಮಾರಿನ ಜ್ಞಾನವನ್ನು ಹಂಚುವುದಾಗಿದೆ. ಇಂದು ಪ್ರತಿ ಮನೆಯಲ್ಲಿ ಹಣ್ಣು, ಸಸ್ಯಗಳ ಕುರಿತು ಸಾಕ್ಷರತೆ ಆಗಬೇಕಿದೆ ಎಂದು ತಿಳಿಸಿದರು.
ವೈವಿಧ್ಯಮಯ ಹಣ್ಣಿನ ಬೆಳೆ ಬೆಳೆದ ಬಾಲಚಂದ್ರ ಸಾಯಿಮನೆ, ಡಾ.ಗಣೇಶ ಹೆಗಡೆ ನೀಲೇಸರ, ಪ್ರಕಾಶ ಕೃಷ್ಣ ಭಟ್ ಅಡೇಮನೆ, ರಾಜೇಂದ್ರ ಹಿಂಡೂಮನೆ, ತಿಮ್ಮಣ್ಣ ನರಸಿಂಹ ದೀಕ್ಷಿತ ಓಣಿಕೈ, ಭತ್ತದ ತಳಿ ಸಂರಕ್ಷಣೆಯಲ್ಲಿ ತೊಡಗಿಕೊಂಡ ಆರ್.ಜಿ. ಭಟ್ ದೇವತೆಮನೆ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ, ಕೃಷಿ ಇಲಾಖೆ ಉಪ ನಿರ್ದೇಶಕ ನಟರಾಜ, ಅರಣ್ಯ ಮಹಾವಿದ್ಯಾಲಯದ ಡೀನ್ ಆರ್.ವಾಸುದೇವ, ಪ್ರಮುಖರಾದ ಲಕ್ಷ್ಮೀನಾರಾಯಣ ಹೆಗಡೆ, ವಿ.ದೇವಪ್ಪ, ಮಂಜುನಾಥ ತೋಟದ್, ವಿಶ್ವೇಶ್ವರ ಭಟ್ಟ ಕೋಟೆಮನೆ ಉಪಸ್ಥಿತರಿದ್ದರು.