ಶಿರಸಿ: ತಾಲೂಕಿನ ಪಂಚಲಿಂಗ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಬಣ್ಣಗಳ ಮೇಳ ನಡೆಯಿತು.
ಎಂಟು ಬಣ್ಣದ ಪ್ರತ್ಯೇಕವಾದ ಎಂಟು ಶಿಕ್ಷಣ ಚೌಕಿಗಳನ್ನು ನಿರ್ಮಿಸಲಾಗಿತ್ತು. ಬಣ್ಣದ ಬಟ್ಟೆ, ವೇಷಭೂಷಣ ಧರಿಸಿ, ವಿದ್ಯಾರ್ಥಿಗಳು ಅದೇ ಬಣ್ಣದ ವಸ್ತುಗಳನ್ನು ವಿವರಿಸಿದರು. ನೀಲಿ ಚೌಕಿಯ ವಿದ್ಯಾರ್ಥಿಗಳು ಆಕಾಶ, ನದಿಗಳು, ಸಮುದ್ರ, ಮೈಲುತುತ್ತಗಳನ್ನು ವಿವರಿಸಿದರೆ, ಕಪ್ಪು ಗುಂಪಿನವರು ಆಯಸ್ಕಾಂತ, ಕಪ್ಪು ಸಮುದ್ರ, ಸಾಂಬಾರು ಪದಾರ್ಥಗಳ ಬಗ್ಗೆ ವಿವರಿಸಿದರು.
ಸುತ್ತಮುತ್ತಲಿನ ಶಾಲಾ ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಕರೆದುತಂದು ಮೇಳದಲ್ಲಿ ಮೇಳೈಸಿಕೊಂಡರು. ಬೇರೆ ಬೇರೆ ಬಣ್ಣದ ಜಗತ್ತಿಗೆ ಹೋದ ಅನುಭವವನ್ನು ಆಗಮಿಸಿದ ವಿದ್ಯಾರ್ಥಿಗಳು ತೆರೆದಿಟ್ಟರು. ಊರಿನವರು, ಪಾಲಕರು, ಇಲಾಖೆಯ ಅಧಿಕಾರಿಗಳು ಈ ಹೊಸ ಪರಿಕಲ್ಪನೆಯನ್ನು ಶ್ಲಾಘಿಸಿದರು.
ಪಠ್ಯದಲ್ಲಿರುವ ಬಣ್ಣವನ್ನೇ ಈ ರೀತಿ ರಂಗಾಗಿ ರೂಪಿಸಿದರೆ ಶಿಕ್ಷಣ ಶಿಕ್ಷೆ ಆಗುವುದಿಲ್ಲ. ವರ್ಣಗಳೊಂದಿಗಿನ ಕಲಿಕೆ ಅವರ್ಣನೀಯ ಎಂದು ಶಾಲಾ ಮುಖ್ಯಾಧ್ಯಾಪಕಿ ಶೋಭಾ ಕಾನಡೆ ಹೇಳಿದರು. ಈ ವೇಳೆ ಶಾಲಾ ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷ ಮಹಾಬಲೇಶ್ವರ ಹೆಗಡೆ ಇದ್ದರು.