ಯಲ್ಲಾಪುರ: ಐದು ನೂರು ವರ್ಷಗಳ ಹಿಂದೆ ಜಾತಿ ಪದ್ಧತಿಯ ವಿರುದ್ಧ ತಮ್ಮ ಕೀರ್ತನೆಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯ ಮಾಡಿದವರು ಕನಕದಾಸರು ಎಂದು ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.
ಅವರು ಪಟ್ಟಣದ ಆಡಳಿತ ಸೌಧದ ಸಭಾಭವನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕನಕದಾಸರ ಕೀರ್ತನೆಗಳು ಕೇವಲ ಮನರಂಜನೆಗೆ ಸೀಮಿತವಲ್ಲ. ಅದರಿಂದ ನಾವೆಷ್ಟು ಬದಲಾವಣೆ ಹೊಂದಿದ್ದೇವೆ, ನಮ್ಮ ಬದುಕಿನಲ್ಲಿ ಅವರ ಸಂದೇಶಗಳನ್ನು ಎಷ್ಟು ಅಳವಡಿಸಿಕೊಂಡಿದ್ದೇವೆ ಎಂಬುದು ಮಹತ್ವದ ಸಂಗತಿ ಎಂದರು.
ಉಪನ್ಯಾಸಕ ಮಾಲತೇಶ ಕಂಬಳಿ, ಕನಕದಾಸರ ಜೀವನ, ಆದರ್ಶಗಳ ಕುರಿತು ಮಾತನಾಡಿದರು. ತಹಸೀಲ್ದಾರ ಗುರುರಾಜ. ಎಂ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅನಿಷ್ಠಗಳ ವಿರುದ್ಧ ಧ್ವನಿ ಎತ್ತಿದ ಕನಕದಾಸರು, ಅನೇಕ ಕೃತಿಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ಕನಕದಾಸ ಜಯಂತಿ ಪ್ರಯುಕ್ತ ಶಿಕ್ಷಣ ಇಲಾಖೆ ಆಯೋಜಿಸಿದ್ದ ಗೀತ ಗಾಯನ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ತಾ.ಪಂ ಇಒ ಜಗದೀಶ ಕಮ್ಮಾರ, ಬಿಇಒ ಎನ್.ಆರ್.ಹೆಗಡೆ, ಲೋಕೋಪಯೋಗಿ ಇಲಾಖೆಯ ಎಇಇ ವಿ.ಎಂ.ಭಟ್ಟ, ಪಶು ಸಂಗೋಪನಾ ಇಲಾಖೆಯ ಡಾ.ಸುಬ್ರಾಯ ಭಟ್ಟ, ತೋಟಗಾರಿಕಾ ಇಲಾಖೆಯ ಸುಭಾಸ ಹೆಗಡೆ, ಕುರುಬ ಸಮಾಜದ ಆನಂದ ಇತರರಿದ್ದರು. ಶ್ರೀಧರ ಮಡಿವಾಳ ನಿರ್ವಹಿಸಿದರು.