ಯಲ್ಲಾಪುರ: ಕೊಳಿಕೇರಿಯಲ್ಲಿ ಎಲ್ಲಾ ಎಕ್ಸ್‌ಪ್ರೆಸ್ ಬಸ್‌ಗಳಿಗೂ ನಿಲುಗಡೆ ಸೌಲಭ್ಯ ನೀಡುವಂತೆ ಸೂಕ್ತ ಆದೇಶ ಇದ್ದಾಗ್ಯೂ ಬಸ್ ನಿಲುಗಡೆ ಮಾಡದೇ ಜನ ವಿರೋಧಿ ನಿಲುವು ತಳೆದಿರುವುದನ್ನು ಖಂಡಿಸಿ ನ.28 ರಂದು ಬೆಳಿಗ್ಗೆ 9.30ರಿಂದ ಕೋಳಿಕೇರಿ ಮೂಲಕ ಹೆದ್ದಾರಿಯಲ್ಲಿ ಹಾದು ಹೋಗುವ ಬಸ್ ತಡೆದು ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕೊಳಿಕೇರಿ ನಿವಾಸಿಗಳು ಎಚ್ಚರಿಸಿದ್ದಾರೆ.
ಅವರು ತಹಶಿಲ್ದಾರ ಗ್ರೇಡ್ 2 ಸಿ.ಜಿ.ನಾಯ್ಕ ಹಾಗೂ ಪೊಲೀಸ್ ಇಲಾಖೆಯವರಿಗೆ ಮನವಿ ಸಲ್ಲಿಸಿದರು. ಯಲ್ಲಾಪುರದಿಂದ 11 ಕಿಮಿ ದೂರದಲ್ಲಿರುವ ಕಣ್ಣಿಗೇರಿ ಗ್ರಾ ಪಂ ವ್ಯಾಪ್ತಿಯ ಕೋಳಿಕೇರಿ ಗ್ರಾಮದಲ್ಲಿ ಸುಮಾರು 2500 ಜನ ವಾಸ್ತವ್ಯ ಇರುತ್ತಾರೆ.ಇಲ್ಲಿನ ಜನರಿಗೆ ಉದ್ಯೋಗ ಕೆಲಸ ಕಾರ್ಯಗಳಿಗೆ ಹುಬ್ಬಳ್ಳಿ ಕಡೆ ಹೋಗಲು,ಅಥವಾ ಯಲ್ಲಾಪುರ ಕಡೆಗೆ ಹೋಗಲು ಬಸ್ ನಿಲುಗಡೆ ಇರುವುದಿಲ್ಲ. ಪ್ರತಿದಿನ 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಗೆ ಹೋಗಲು, 200 ರಷ್ಟು ಗ್ರಾಮಸ್ಥರು ಕೆಲಸಕ್ಕೆ ಹೋಗಲು ಬಸ್ ಅವಲಂಬಿಸಿದ್ದಾರೆ. ಈ ಕುರಿತು ಹತ್ತಾರು ಬಾರಿ ಸಾರಿಗೆ ಇಲಾಖೆಗೆ ಮನವಿ ಸಲ್ಲಿಸಿದ್ದು ಇರುತ್ತದೆ. ಅದಕ್ಕೆ ಸ್ಪಂದಿಸಿರುವುದಿಲ್ಲ. ಹಿಂದೆ ಪ್ರತಿಭಟನೆ ಎಚ್ಚರಿಕೆ ನೀಡಿದಾಗ ಕಳೆದ ಜುಲೈ 4 ರಂದು ಕೋಳಿಕೇರಿಯಲ್ಲಿ ನಾಲ್ಕು ಹಂತದಲ್ಲಿ ಪ್ರಯಾಣಿಕರನ್ನು ಇಳಿಸಿ ಹತ್ತಿಸಿಕೊಂಡು ಹೋಗಲು ಸಾರ್ವಜನಿಕರಿಂದ ಯಾವುದೇ ದೂರು ಬರದಂತೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಮುಖ್ಯ ವ್ಯವಸ್ಥಾಪಕರು ನಿರ್ದೇಶನ ನೀಡಿದ್ದು ಇರುತ್ತದೆ. ಈ ಆದೇಶ ಇದ್ದರೂ,ಯಾವುದೇ ಬಸ್ ಇಲ್ಲಿ ನಿಲುಗಡೆ ಮಾಡದೇ ಇರುವುದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕಾರಣ ಈ ಬಗ್ಗೆ ಸ್ಪಂದಿಸದೇ ಇದ್ದಲ್ಲಿ ನ.28 ರಂದು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಈವೇಳೆ ಕಣ್ಣಿಗೇರಿ ಗ್ರಾಪಂ ಉಪಾಧ್ಯಕ್ಷ ನಾಗೇಶ್ ನಾರಾಯಣ ಗಾವಡೆ, ಸದಸ್ಯೆ ಲಕ್ಷ್ಮೀ ವಸಂತ ಪಾಟೀಲ್, ರಾಜ್ಯ ಸಿದ್ದಿ ಬುಡಕಟ್ಟು ಜನಪರ ವೇದಿಕೆಯ ಗೌರವಾಧ್ಯಕ್ಷ ಜೋನ್ ಬಿಳಕಿಕರ್, ಎಸ್ ಡಿಎಂಸಿ ಅಧ್ಯಕ್ಷ ರಾಘು ಅಣ್ಣಪ್ಪ ಮರಾಠೆ,ಬಿಜೆಪಿ ಬೂತ್ ಅಧ್ಯಕ್ಷ ನಾಗರಾಜ ಮಾರುತಿ ಪಾಟೀಲ್, ಉನ್ನತ ಗೌಳಿ ಸೊಸೈಟಿ ಅಧ್ಯಕ್ಷ ಮಾಕು ಸೋನು ಕೊಕರೆ ಇದ್ದರು.