ಯಲ್ಲಾಪುರ: ಅಡಕೆ ವ್ಯವಹಾರಸ್ಥರ ಸಂಘ, ಸಂಕಲ್ಪ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನೀನಾಸಂ ತಿರುಗಾಟ ತಂಡದ ನಾಟಕ ಪ್ರದರ್ಶನ ನ.28 ಹಾಗೂ 29 ರಂದು ಪಟ್ಟಣದ ಎಪಿಎಂಸಿ ರೈತ ಭವನದಲ್ಲಿ ನಡೆಯಲಿದೆ ಎಂದು ಮಲೆನಾಡು ಕೃಷಿ ಅಭಿವೃದ್ಧಿ ಸಹಕಾರಿ ಸಂಘದ ಅಧ್ಯಕ್ಷ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಹೇಳಿದರು.
ಅವರು ಶನಿವಾರ ಸುದ್ದೊಗೋಷ್ಠಿಯಲ್ಲಿ ಮಾತನಾಡಿ,ನ. 28 ರ ಸಂಜೆ 6.30 ಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸುವರು. ಎರಡನೇ ದಿನದ ಕಾರ್ಯಕ್ರಮವನ್ನು ನ.29 ರಂದು ಸಂಜೆ 6.30 ಕ್ಕೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಉದ್ಘಾಟಿಸಲಿದ್ದಾರೆ. ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ವಿವರಿಸಿದರು. ಸಂಘಟಕ ನಾರಾಯಣ ಭಟ್ಟ ಮಾತನಾಡಿ, 28 ರಂದು ಡಾ.ಚಂದ್ರಶೇಖರ ಕಂಬಾರ ವಿರಚಿತ ‘ಹುಲಿಯ ನೆರಳು’ ಹಾಗೂ 29 ರಂದು ಲೂಯಿ ನಕೋಸಿ ರಚನೆಯ ‘ಆಲಯ ಈ ಲಯ’ ನಾಟಕ ಪ್ರದರ್ಶನಗೊಳ್ಳಲಿದೆ. ಎರಡು ತಾಸುಗಳ ಕಾಲ ಈ ನಾಟಕ ನಡೆಯಲಿದೆ. ಹೊಸ ಅಲೆಯ ನಾಟಕದ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಸಂಯೋಜಿಸಲಾಗಿದೆ ಎಂದರು.
ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ, ಸಂಗೀತ, ನಾಟಕ, ಯಕ್ಷಗಾನ, ಭಜನೆ, ತಾಳಮದ್ದಲೆ, ಕೀರ್ತನೆ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿದೆ. ತಾಲೂಕಿನಾದ್ಯಂತ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಿರುವುದು ಸಂತಸದ ವಿಚಾರ ಎಂದರು. ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ, ಸಂಘಟಕ ಲೋಕನಾಥ ಗಾಂವ್ಕರ ಇದ್ದರು.