ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ಪ್ರಥಮ ವರ್ಷದ ವಿದ್ಯಾರ್ಥಿಗಳು ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಭೇಟಿ ನೀಡಿದರು.
ಅಣು ವಿದಳನ ಪ್ರಕ್ರಿಯೆಯಿಂದ ಹೊರ ಹೊಮ್ಮುವ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಪರಿವರ್ತಿಸುವ ವಿಧಾನವನ್ನು ಡಿಸೋಜಾ ಮತ್ತು ಪಂಚಮುಖಿ ವಿವರಿಸಿದರು. ಹಾನಿಕಾರಕ ಅಣು ವಿಕಿರಣ ಸೋರಿಕೆಯಾಗದಂತೆ ವಿದ್ಯುತ್ ಸ್ಥಾವರದಲ್ಲಿ ಅಳವಡಿಸಿರುವ ಜಾಗೃತಾ ಕ್ರಮಗಳ ಕುರಿತು ರಾಜು ನಾಯಕ್‌ರಿಂದ ಮಾಹಿತಿ ಪಡೆದುಕೊಂಡರು. ಶಕ್ತಿ ಪರಿವರ್ತನಾ ನಂತರ ಉಳಿಯುವ ಅಣು ವಿಕೀರಣ ವಸ್ತುವಿನ ವಿಲೇವಾರಿಗೆ ತೆಗೆದುಕೊಂಡಿರುವ ಉಪಕ್ರಮಗಳ ಕುರಿತಾಗಿ ಸತೀಶ್ ನಾಯಕ್ ವಿವರಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಾರವಾರದ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ವಿವಿಧ ಪ್ರಯೋಗಗಳನ್ನು ವೀಕ್ಷಿಸಿದರು. ಅಷ್ಟೇ ಅಲ್ಲದೆ ಸೇನಾ ಹಡಗನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ರಸಾಯನ ಶಾಸ್ತ್ರ ವಿಭಾಗದ ಡಾ.ರವೀಂದ್ರ ಮುನ್ನೋಳ್ಳಿ ಹಾಗೂ ಡಾ.ವಿನೋದ್ ನಾಯಕ್ ಅವರ ಮಾರ್ಗದರ್ಶನದಲ್ಲಿ 60ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಭೇಟಿ ಕೈಗೊಂಡಿದ್ದರು. ಅಣು ವಿದ್ಯುತ್ ಸ್ಥಾವರದ ಶಕ್ತಿ ಪರಿವರ್ತನಾ ಪ್ರಕ್ರಿಯೆ, ವಿಜ್ಞಾನದ ಮೂಲ ತತ್ವ, ಮುಂತಾದ ವಿಷಯಗಳ ಬಗ್ಗೆ ಹೆಚ್ಚಿನ ಅರಿವು ಮೂಡಿಸುವಲ್ಲಿ ಈ ಉಪಕ್ರಮವು ಅತ್ಯಂತ ಸಹಕಾರಿಯಾಗಿದೆ ಎಂದು ಪ್ರಾಚಾರ್ಯ ಡಾ.ವಿ.ಎ.ಕುಲಕರ್ಣಿ ತಿಳಿಸಿದ್ದಾರೆ.