ಅಂಕೋಲಾ: ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಕರ್ನಾಟಕ ಪ್ರಾಂತ ರೈತ ಸಂಘ, ಸಂಯುಕ್ತ ಹೋರಾಟ- ಕರ್ನಾಟಕ, ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ನ.26ರಿಂದ 28ರವರೆಗೆ ಫ್ರೀಡಂ ಪಾರ್ಕ್ನಲ್ಲಿ ನಡೆಯುವ 72 ಗಂಟೆಗಳ ಮಹಾಧರಣಿಯಲ್ಲಿ ಜಿಲ್ಲೆಯಾದ್ಯಂತ ನೂರಾರು ರೈತರು ಭಾಗಿಯಾಗಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಟಿ ಸಮಿತಿಗಳ ಕರೆಯ ಮೇರೆಗೆ ಆಯೋಜಿಸಿರುವ ಮಹಾಧರಣಿಯಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಉತ್ತರ ಕನ್ನಡ ಜಿಲ್ಲಾ ಸಮಿತಿಗಳ ಕಾರ್ಯಕರ್ತರು ಮಹಾಧರಣಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪ್ರಮುಖವಾಗಿ ರೈತರ ಉತ್ಪನ್ನಗಳಿಗೆ ಎಂ.ಎಸ್.ಸ್ವಾಮಿನಾಥನ್ ಶಿಫಾರಸ್ಸಿನ ಪ್ರಕಾರ ಕನಿಷ್ಠ ಬೆಂಬಲ ಬೆಲೆ ಹಾಗೂ ಖರೀದಿ ಖಾತ್ರಿ ಒದಗಿಸುವ ಶಾಸನ ಜಾರಿ ಮಾಡಬೇಕು. ರೈತರಿಗೆ ನೀಡುವ ಬಿತ್ತನೆ ಬೀಜ ಮತ್ತು ರಸಗೊಬ್ಬರ ಹಾಗೂ ವಿದ್ಯುತ್ ಶಕ್ತಿ ಮೇಲಿನ ಸಬ್ಸಿಡಿ ಮೊತ್ತವನ್ನು ಹೆಚ್ಚಿಸಬೇಕು. ಕಾರ್ಪೊರೇಟ್ ಪರವಾದ ಪಿಎಮ್ ಫಸಲ್ ಭೀಮಾ ಯೋಜನೆ ರದ್ದುಪಡಿಸಬೇಕು. ಹೊಸ ಪಿಂಚಣಿ ಯೋಜನೆಯನ್ನು ರದ್ದು ಮಾಡಿ ಹಳೆ ಪಿಂಚಣಿ ಯೋಜನೆಯನ್ನೇ ಜಾರಿ ಮಾಡಬೇಕು. ಬೆಲೆ ಏರಿಕೆಯನ್ನು ನಿಯಂತ್ರಿಸಿ ಅಗತ್ಯ ವಸ್ತುಗಳ ಮೇಲಿನ ಕೇಂದ್ರೀಯ ತೆರಿಗೆಯನ್ನು ಗಣನೀಯವಾಗಿ ಇಳಿಕೆ ಮಾಡಬೇಕು. ಕೃಷಿ ಯಂತ್ರೋಪಕರಣಗಳ ಮೇಲಿನ ಜಿಎಸ್ಟಿ ರದ್ದುಪಡಿಸಬೇಕು. ನೇರ ನಗದು ವರ್ಗಾವಣೆ ರದ್ದುಪಡಿಸಿ ಸಾರ್ವತ್ರಿಕ ಪಡಿತರ ವ್ಯವಸ್ಥೆ ಜಾರಿಗೊಳಿಸಬೇಕು. ಉಚಿತ ಶಿಕ್ಷಣ, ಆರೋಗ್ಯ, ನೀರು, ನೈಮಲ್ಯ ಮುಂತಾದ ಮೂಲಭೂತ ಹಕ್ಕುಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ಜನ ವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ ರದ್ದಾಗಬೇಕು. ಬಗರ್ ಹುಕ್ಕುಂ ಸಾಗವಳಿಗಾರರು ಸೇರಿದಂತೆ ಎಲ್ಲಾ ಉಳುಮೆ ರೈತರಿಗೆ ಭೂಮಿ ಹಕ್ಕು ಖಾತರಿ ಪಡಿಸಬೇಕು. ಅರಣ್ಯ ಹಕ್ಕು ಕಾಯ್ದೆ 2006ರನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ರದ್ದಾಗಬೇಕು. ವಿದ್ಯುತ್ ರಂಗವನ್ನು ಖಾಸಗಿಕರಣ ಗೊಳಿಸುವ ವಿದ್ಯುತ್ ತಿದ್ದುಪಡಿ ಮಸೂದೆ 2022ನ್ನು ಸಂಸತ್ತಿನಿಂದ ವಾಪಸ್ ಪಡೆಯಬೇಕು. ಗ್ರಾಮ ಪಂಚಾಯತಿ ನೌಕರರಿಗೆ ಕನಿಷ್ಠ ವೇತನವನ್ನು ಜಾರಿ ಮಾಡಬೇಕು. ಕಾರ್ಮಿಕ ಮಕ್ಕಳಿಗೆ ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಟ್ಟಡ ಕಾರ್ಮಿಕರಿಗೆ ಜಾರಿಯಲ್ಲಿರುವ ಸೌಲಭ್ಯಗಳ ಜೊತೆಗೆ ಇಎಸ್‌ಐ ಮತ್ತು ವಸತಿ ಸೌಲಭ್ಯವನ್ನು ಒದಗಿಸಬೇಕು. ಮುಂತಾದ ಬೇಡಿಕೆಗಳಿಗಾಗಿ ಆಗ್ರಹಿಸಿ ಮಹಾಧರಣಿ ನಡೆಯಲಿದೆ ಎಂದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ತಿಮ್ಮಪ್ಪ ಗೌಡ, ಸಹ ಕಾರ್ಯದರ್ಶಿ ಪ್ರೇಮಾನಂದ ವೇಳಿಪ ಜೊಯಿಡಾ, ಅಂಕೋಲಾ ತಾ.ಕಾರ್ಯದರ್ಶಿ ಸಂತೋಷ ನಾಯ್ಕ, ರಾಜೇಶ ಗೌಡ ಜೊಯಿಡಾ, ಗಣೇಶ ಪಟಗಾರ, ಶಿವರಾಮ ಪಟಗಾರ, ಬೀರಾ ಗೌಡ ಹೊನ್ನಾವರ, ಗೌರೀಶ ನಾಯಕ, ಬುಜಂಗ ಚಿಬ್ಲಕರ ಹಳಿಯಾಳ, ಬಾಬು ಉನಗೇಕರ ಉಪಸ್ಥಿತರಿದ್ದರು.