ಶಿರಸಿ: ತಾಲೂಕಿನಲ್ಲಿ ಈ ವರ್ಷ ವಿದ್ಯಾರ್ಥಿಗಳ ಕೊರತೆಯಿಂದಾಗಿ ಎರಡು ಶಾಲೆಗಳನ್ನು ಮುಚ್ಚಲಾಗಿದೆ. ಇದುವರೆಗೆ 17 ಶಾಲೆಗಳು ಸ್ಥಗಿತಗೊಂಡಂತಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ತಿಳಿಸಿದರು.
ತಾ.ಪಂ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಈ ವರ್ಷ ಶಿಂಗನಹಳ್ಳಿ, ಕೊಟ್ಟಿಗೆ ಹಳ್ಳಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಲಾಗಿದೆ. ಮುಚ್ಚಿರುವ ಶಾಲೆಗಳ ಕಟ್ಟಡವನ್ನು ಗ್ರಾ.ಪಂ. ಸುಪರ್ದಿಗೆ ನೀಡಲಾಗಿದ್ದು, ಅಂಗನವಾಡಿ ಅಥವಾ ಲೈಬ್ರೆರಿಗೆ ಬಳಕೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ 147 ಶಿಕ್ಷಕರ ಹುದ್ದೆ ಖಾಲಿ ಇದೆ. ಪ್ರೌಢಶಾಲೆಯಲ್ಲಿ 20, ಅನುದಾನಿತ ಶಾಲೆಗಳಲ್ಲಿ 68 ಹುದ್ದೆ ಖಾಲಿ ಇದೆ. ಈ ವರ್ಷ 64 ಶಿಕ್ಷಕರ ನೇಮಕ ಆಗಿದ್ದು, ಇನ್ನೊಂದು ವಾರದಲ್ಲಿ ಕೆಲಸಕ್ಕೆ ಹಾಜರಾಗಲಿದ್ದಾರೆ. ಉಳಿದ ಖಾಲಿ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದ್ದೇವೆ. 1.57 ಲಕ್ಷ ಪುಸ್ತಕಗಳು ಈಗಾಗಲೇ ವಿತರಣೆ ಆಗಿದೆ. ಶೂ, ಸಾಕ್ಸ್ ಸಹ ವಿತರಣೆ ಆಗಿದೆ. ಈ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ 2100 ಮಕ್ಕಳಿದ್ದಾರೆ. ಅವರಿಗೆ ಮೊದಲ ಹಂತದ ಪರೀಕ್ಷೆ ನಡೆಸಿ ವಿಶೇಷ ತರಗತಿ ನಡೆಸುತ್ತಿದ್ದೇವೆ. ಜ.15ರ ಒಳಗೆ ಸಿಲೆಬಸ್ ಮುಗಿಸಿ ಸರಣಿ ಪರೀಕ್ಷೆ ಆರಂಭಿಸುತ್ತೇವೆ ಎಂದರು.
ಕೃಷಿ ಇಲಾಖೆ ಅಧಿಕಾರಿ ಮಧುಕರ ನಾಯ್ಕ ಮಾಹಿತಿ ನೀಡಿ, ಈ ವರ್ಷ ಶೇ. 19ರಷ್ಟು ಮಳೆ ಕೊರತೆ ಆಗಿದೆ. ಆದರೆ, ಮಳೆ ಹಂಚಿಕೆ ಸರಿಯಾಗದ ಕಾರಣ ಶೇ 99 ಭಾಗದಲ್ಲಿ 50ಕ್ಕಿಂತ ಜಾಸ್ತಿ ಬೆಳೆ ಹಾನಿ ಆಗಿದೆ. ಬರ ಪರಿಹಾರದ ಹಣ ಇನ್ನೂ ಬರಬೇಕಿದೆ. 27 ಹಳ್ಳಿಗಳ ಬರ ಸಮೀಕ್ಷೆ ಮಾಡಿದ್ದೇವೆ. ಬೆಳೆಯ ಪ್ರಮಾಣ ಕಡಿಮೆ ಇದೆ. ಬರ ಪರಿಹಾರ ಗ್ರಾಮೀಣ ಮಟ್ಟದಲ್ಲಿ ನಡೆಸಲಾಗಿದ್ದು, ಕ್ರಾಪ್ ಸರ್ವೆ ಆಧಾರದಲ್ಲಿ ಪ್ರತಿ ಹೆಕ್ಟೇರ್ ಗೆ 13600 ರೂ. ಬೀಜ ಗೊಬ್ಬರ ಹಾನಿ ಸರಿದೂಗಿಸುವ ಸಲುವಾಗಿ ನೀಡಲಾಗುತ್ತಿದೆ ಎಂದರು.
ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿ, ಹೈನುಗಾರಿಕೆ ಉತ್ತೇಜನಕ್ಕೆ ಆಕಳನ್ನು ರೈತರಿಗೆ ನೀಡುವ ಯೋಜನೆ ತಾಲೂಕಿನಲ್ಲಿಯೂ ಆರಂಭಿಸಿದ್ದೇವೆ, 20 ರೈತರಿಗೆ ತಲಾ 20 ಸಾವಿರ ಸಹಾಯ ಧನ ನೀಡುತ್ತೇವೆ. ಕಾಲುಬಾಯಿ ರೋಗದ ನಿಯಂತ್ರಣಕ್ಕೆ ತಾಲೂಕಿನ 48 ಪಶುಗಳಲ್ಲಿ 43 ಸಾವಿರಕ್ಕೆ ಲಸಿಕೆ ಹಾಕಲಾಗಿದೆ ಎಂದರು.
ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸತೀಶ ಹೆಗಡೆ ಇತರರಿದ್ದರು.