ಕುಮಟಾ: ಎಲ್ಲೆಡೆ ನಿಧಾನವಾಗಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡುತ್ತಿದ್ದು, ಇದಕ್ಕೆ ಪೂರಕವೆಂಬ0ತೆ ಶಾಲೆಯ ವಿದ್ಯಾರ್ಥಿಗಳು ವಿವಿಧ ಬಗೆಯ ಆಕಾಶದ ಬುಟ್ಟಿಗಳನ್ನು ತಯಾರಿಸಿ ಶಾಲೆಗೆ ತಂದು ಪ್ರದರ್ಶಿಸಿ ಗಮನ ಸೆಳೆದರು.
ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ನ ಸರಸ್ವತಿ ವಿದ್ಯಾ ಕೇಂದ್ರದ ಪುಟಾಣಿ ಮಕ್ಕಳು ಮನೆಯಲ್ಲಿ ತಾವೇ ತಯಾರಿಸಿದ ವಿವಿಧ ಮಾದರಿಯ ಆಕಾಶ ಬುಟ್ಟಿಗಳನ್ನು ಶಾಲೆಯಲ್ಲಿ ಪ್ರದರ್ಶಿಸಿದರು. ತೆಂಗಿನ ಚಿಪ್ಪು, ತೆಂಗಿನ ನಾರು, ಹುಲ್ಲುಕಡ್ಡಿ, ಐಸ್ ಕ್ರೀಂಮ್ ಚಮಚ, ಬಿದಿರು, ವೃತ್ತಪತ್ರಿಕೆ, ಬಣ್ಣದ ಹಾಳೆಗಳು, ಪೋಂಮ್ ಹಾಳೆಗಳು, ಮಣಿಗಳು, ರಟ್ಟು, ದಾರಗಳಿಂದ ತಯಾರಿಸಿದ ವಿವಿಧ ಬಗೆಯ ಆಕಾಶಬುಟ್ಟಿಗಳನ್ನು ಮಕ್ಕಳು ತಯಾರಿಸಿ ವಿಶೇಷತೆ ಮೆರೆದರು.
ವಿದ್ಯಾರ್ಥಿಗಳಿಗೆ ಸಂಸ್ಕೃತಿಯ ಅರಿವು ಮೂಡಿಸುವುದು ಹಾಗೂ ಕ್ರಿಯಾಶೀಲತೆ ಬೆಳೆಸುವ ದೃಷ್ಟಿಯಿಂದ ಈ ಪ್ರದರ್ಶನ ಏರ್ಪಡಿಸಲಾಗಿದ್ದು, ಮಕ್ಕಳು ತಯಾರಿಸಿದ ಬಣ್ಣ ಬಣ್ಣದ ಆಕಾಶ ಬುಟ್ಟಿಗಳನ್ನು ಶಾಲೆಯ ಆವಾರದಲ್ಲಿ ಕಟ್ಟಿ ಗಮನ ಸೆಳೆದರು.