ಸಿದ್ದಾಪುರ: ಸ್ವಾವಲಂಬಿ ಬದುಕಿಗೆ ನರೇಗಾ ಆಸರೆಯಾಗಿದ್ದು, ಗ್ರಾಮೀಣ ಕೂಲಿ ಕಾರ್ಮಿಕರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಕೊರ್ಲಕೈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಂಗಳವಾರ ನಡೆದ ‘ನರೇಗಾ ನಡಿಗೆ ಸುಸ್ಥಿರತೆಯೆಡೆಗೆ’ ಅಭಿಯಾನದಲ್ಲಿ ಕೊರ್ಲಕೈ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಟರಾಜ ನಾಯ್ಕ್ ಹೇಳಿದರು.
ಕೊರ್ಲಕೈ ಗ್ರಾಮದಲ್ಲಿ ಪಿಡಿಓ ನಟರಾಜ ನಾಯ್ಕ್ ಅವರ ನೇತೃತ್ವದಲ್ಲಿ ಮನೆ ಮನೆ ಭೇಟಿ ನೀಡುವ ಮೂಲಕ ಜನರಿಗೆ ನರೇಗಾ ಯೋಜನೆಯಡಿ ಜನ ಕೈಗೊಳ್ಳಬಹುದಾದ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಮಾಹಿತಿ ನೀಡಿದರು. ನರೇಗಾ ಯೋಜನೆಯಲ್ಲಿ ಕೂಲಿ ಕಾರ್ಮಿಕರಿಗೆ ಸಿಗುವ ಕೂಲಿ ಮೊತ್ತ, ಇನ್ನಿತರ ಸೌಲಭ್ಯಗಳ ಕುರಿತು ತಿಳಿಸಿದರು. ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಮಿತಿಯನ್ನು 2.5 ಲಕ್ಷದಿಂದ 5ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು. ದುಡಿಯುವ ಕೈಗಳಿಗೆ ಕೆಲಸದೊಂದಿಗೆ ಸಮಾನ ಕೂಲಿ ಒದಗಿಸುವ ಉದ್ಯೋಗ ಖಾತರಿ ಯೋಜನೆಯ ಲಾಭವನ್ನು ಎಲ್ಲರೂ ಪಡೆಯಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಕೊರ್ಲಕೈ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸತೀಶ ಚನ್ನಯ್ಯ, ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.