ಶಿರಸಿ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ವತಿಯಿಂದ ಶತಕೋಟಿ ರಾಮತಾರಕ ನಾಮಜಪ ಮಹಾಯಜ್ಞವನ್ನು ಅ.24 ವಿಜಯದಶಮಿಯಂದು ಪ್ರಾರಂಭಿಸಿ, ಅಯೋಧ್ಯೆಯಯಲ್ಲಿ ಶ್ರೀ ರಾಮನ ಪ್ರತಿಷ್ಠಾಪನ ದಿನದಂದು ಶ್ರೀ ರಾಮತಾರಕ ಮಹಾಯಾಗವನ್ನು ಮಾಡುವುದರ ಮೂಲಕ ಸಂಪನ್ನಗೊಳಿಸಲಾಗುವುದು ಎಂದು ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ತಿಳಿಸಿದರು.
ಅವರು ಗುರುವಾರ ನಗರದ ಯೋಗ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಲೋಕಕಲ್ಯಾಣಾರ್ಥವಾಗಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಿಂದೂ ಧರ್ಮದ ರಾಮ ಭಕ್ತರು ಪ್ರತಿನಿತ್ಯವೂ ಶ್ರೀ ರಾಮ ಜಯರಾಮ ಜಯಜಯ ರಾಮ ಎಂಬ ಮಹಾಮಂತ್ರವನ್ನು ತಮ್ಮ ಮನೆಯಲ್ಲಿ ಜಪಿಸಬೇಕು. ಅಲ್ಲದೇ, ಹಿಂದೂ ಧಾರ್ಮಿಕ ಶೃದ್ಧಾ ಕೇಂದ್ರಗಳಲ್ಲಿ ಜಪಿಸಬಹುದಾಗಿದೆ. ಯಾವುದೇ ಜಾತಿ ಬೇಧವಿಲ್ಲದೆ ಎಲ್ಲಾ ವಯಸ್ಸಿನವರೂ ಈ ಜಪ ಮಾಡಬಹುದು. ಪ್ರತಿನಿತ್ಯ ಕನಿಷ್ಠ 108 ಜಪ ಮಾಡಬೇಕು ಹಾಗೂ ಜಪ ಮಾಡಿದ ಸಂಖ್ಯೆಯನ್ನು ಬರೆದಿಟ್ಟುಕೊಂಡು ಕೊನೆಯಲ್ಲಿ ಸಂಘಟಕರಿಗೆ ನೀಡಬೇಕು ಎಂದ ಅವರು, ಶತಕೋಟಿ ರಾಮತಾರಕ ನಾಮಜಪ ಮಹಾಯಜ್ಞ ಮತ್ತು ಶ್ರೀ ರಾಮತಾರಕ ಮಹಾಯಾಗದಲ್ಲಿ ಪಾಲ್ಗೊಂಡು ಈ ಕಾರ್ಯವನ್ನು ಯಶಸ್ವಿಗೊಳಿಸಿ, ದೇಶ ಸುಭಿಕ್ಷವಾಗಿರಲೆಂದು ಪ್ರಾರ್ಥಿಸಿ ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಹಾಸಭಾದ ಪ್ರಮುಖರಾದ ಆರ್.ಎಮ್.ಹೆಗಡೆ, ಶ್ರೀಪಾದ ರಾಯ್ಸದ್, ಎನ್.ಎಸ್.ಭಟ್, ಪ್ರಸಾದ ಹೆಗಡೆ ಯಲ್ಲಾಪುರ ನಾರಾಯಣ ಹೆಗಡೆ ಗುಂಡ್ಕಲ್, ಅಂಕೋಲಾ ಮತ್ತಿತರರು ಇದ್ದರು.