ಶಿರಸಿ: ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡದೆ, ಶಿಕ್ಷಣದಿಂದ ವಂಚಿತರಾಗುವಂತೆ ಮಾಡುತ್ತಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಶಿರಸಿ ಜಿಲ್ಲಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ತಹಶೀಲ್ದಾರ ಕಚೇರಿಯ ಎದುರು ಬುಧವಾರ ಎಬಿವಿಪಿ ಕಾರ್ಯಕರ್ತರು ಜಮಾಯಿಸಿ, ಶೀಘ್ರವಾಗಿ ವಿದ್ಯಾರ್ಥಿವೇತನವನ್ನು ನೀಡುವಂತೆ ಒತ್ತಾಯಿಸಿ ಪ್ರತಿಭಟಿಸಿದರು. ನಂತರ ತಹಸೀಲ್ದಾರ್ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು.
ರಾಜ್ಯದಲ್ಲಿ 4 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಇಂದು ರಾಜ್ಯ ಸರ್ಕಾರ 2022-23 ನೇ ಸಾಲಿನ ವಿದ್ಯಾರ್ಥಿ ವೇತನವನ್ನು ತಡೆ ಹಿಡಿದಿದೆ, SSP ತಂತ್ರಾಂಶದಲ್ಲಿ ವಿದ್ಯಾರ್ಥಿವೇತನ ಮಂಜೂರಾಗಿರುವುದಾಗಿ ತೋರಿಸಿದ್ದರು, ವಿದ್ಯಾರ್ಥಿಗಳ ಖಾತೆಗೆ ಹಣ ಜಮಾವಾಗಿರುವುದಿಲ್ಲ. ಹಣ ಜಮಾವಾಗುವ ಮೊದಲೇ ಮುಂದಿನ ಶೈಕ್ಷಣಿಕ ಸಾಲಿನ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನಿಸಿರುವುದು ವಿದ್ಯಾರ್ಥಿಗಳಿಗೆ ಗೊಂದಲವನ್ನು ಉಂಟುಮಾಡಿದ್ದು ಈ ಕೂಡಲೇ ರಾಜ್ಯ ಸರ್ಕಾರ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳಿಗೆ ನೀಡಿ, ಶಿಕ್ಷಣದಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ವಂಚಿತರಾಗಿವುದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಶಿರಸಿ ಜಿಲ್ಲಾ ಸಂಚಾಲಕರಾದ ಕುಮಾರ್ ಗೌಡ, ಶಿರಸಿ ನಗರ ಕಾರ್ಯದರ್ಶಿ ಪ್ರಸನ್ನ ಮರಾಠಿ, ರಾಜ್ಯ ಕಾರ್ಯಕಾರಣಿ ಅಜಿತ್ ದೊಡ್ಮನಿ, ಕಾರ್ಯಕರ್ತರಾದ ಯೋಗೇಶ್ ಭಂಡಾರಿ, ಗಣೇಶ್, ಚರಣ್ ಗೌಡ, ಜಗನ್ನಾಥ ಗೌಡ, ಅಜಯ್, ಮಾರುತಿ, ದೀಪಕ್, ಸಚಿನ್, ಅಭಿಷೇಕ್ ಮತ್ತಿತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.