ಅಂಕೋಲಾ: ಗೋಖಲೆ ಸೆಂಟಿನರಿ ಕಾಲೇಜಿನಲ್ಲಿ 50 ವರ್ಷಗಳ ಹಿಂದೆ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಒಂದೆಡೆ ಸೇರಿ ಶಿಕ್ಷಣ ತಜ್ಞ ದಿನಕರ ದೇಸಾಯಿ ಅವರಿಗೆ ಗೌರವಾರ್ಪಣೆ, ತಮಗೆ ಶಿಕ್ಷಣ ನೀಡಿದ ಗುರುಗಳಿಗೆ ಸನ್ಮಾನ, ಕಾಲೇಜಿನಲ್ಲಿ ತಾವು ಕಳೆದ ಮಧುರ ಕ್ಷಣಗಳ ಸ್ಮರಣೆ ಮಾಡುವ ಮೂಲಕ ಎರಡು ದಿನಗಳ ಕಾಲ ವಿಧಾಯಕ ಚಟುವಟಿಕೆಗೆ ಸಾಕ್ಷಿಯಾದರು.
1966 ರಿಂದ 1971 ರವರೆಗೆ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳಾದ ಮುಂಬೈ ಹೈಕೊರ್ಟ್ ನಿವೃತ್ತ ನ್ಯಾಯಾಧೀಶ ಜಯಪ್ರಕಾಶ ದೇವಧರ, ಪದವಿ ಪೂರ್ವ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಲೋಕನಾಥ ಕಾನಡೆ, ನಿವೃತ್ತ ಬ್ಯಾಂಕ್ ಅಧಿಕಾರಿಗಳಾದ ಬಾಲಚಂದ್ರ ಕೆ. ಕಾಮತ್, ವಿ.ಎನ್.ನಾಯಕ, ಸುರೇಶ ಶೇಣ್ವಿ, ಭಾರತೀಯ ಸೈನ್ಯದಲ್ಲಿ ಅಧಿಕಾರಿಯಾಗಿದ್ದ ಅನಿಲ್ ಭಟ್, ಯುಜಿಸಿ ಸಲಹಾ ಮಂಡಳಿ ಸದಸ್ಯರಾಗಿದ್ದ ಡಾ. ಆನಂದು ಶೇಣ್ವಿ, ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಮೋಹನ ಬಸರೂರು, ಗಣರಾಜ ನಾಯಕ, ವೆಂಕಟರಮಣ ಶೆಟ್ಟಿ ,ವಸಂತ ಪಿ.ಕಾಮತ್, ಗಣಪತಿ ಭಟ್, ಡಾ. ಆರ್.ಎ. ಕಾಮತ್ ಸೇರಿದಂತೆ 23 ಹಳೆಯ ವಿದ್ಯಾರ್ಥಿಗಳು ಭಾನುವಾರ ಮತ್ತು ಸೋಮವಾರ ಕಾಲೇಜಿಗೆ ಭೇಟಿ ನೀಡಿದರು.
ತಮಗೆ ಕಲಿಸಿದ ಪ್ರಾಧ್ಯಾಪಕರಾದ ಎಂ. ಎಸ್. ಹಬ್ಬು, ನಿರ್ಮಲಾ ಗಾಂವಕರ, ಎ.ಡಿ ಗಾಂವಕರ, ನಿವೃತ್ತ ಅಧೀಕ್ಷಕ ಕೃಷ್ಣಾನಂದ ಶೆಟ್ಟಿ, ನಿವೃತ್ತ ಲೆಕ್ಕ ಅಧೀಕ್ಷಕ ಆನಂದು ಶೆಟ್ಟಿ, ನಿವೃತ್ತ ಜವಾನರಾದ ಕುಸ್ಲು ಗೌಡ, ಆನಂದು ಶೇಣ್ವಿ, ತೋಕು ಆಗೇರ್, ರಾಮಚಂದ್ರ ನಾಯ್ಕ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆಯನ್ನು ಪ್ರಾಚಾರ್ಯ ಸಿದ್ಧಲಿಂಗಸ್ವಾಮಿ ವಸ್ತ್ರದ ವಹಿಸಿದ್ದರು. ಕೆನರಾ ವೆಲ್‌ಫೆರ್ ಟ್ರಸ್ಟಿನ ಕಾರ್ಯದರ್ಶಿ ಕೆ. ವಿ. ಶೆಟ್ಟಿ, ಟ್ರಸ್ಟಿಗಳಾದ ವಿ. ಎನ್. ನಾಯಕ, ಆಡಳಿತ ಮಂಡಳಿಯ ಸದಸ್ಯ ವಿ. ಆರ್. ಕಾಮತ, ಪದವಿ ಪೂರ್ವ ವಿಭಾಗದ ಪ್ರಾಚಾರ್ಯ ಸುಜಾತಾ ಲಾಡ, ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಾಗಶ್ರೀ ಸಂಗಡಿಗರು ಪ್ರಾರ್ಥನೆ ಹಾಡಿದರು. ಶಶಿಕಾಂತ ಹೆಗಡೆ ನಿರೂಪಿಸಿ ವಂದಿಸಿದರು.