ಯಲ್ಲಾಪುರ: ಕರ್ನಾಟಕ ಕಲಾ ಸನ್ನಿಧಿ ಸಂಸ್ಥೆಯ ವತಿಯಿಂದ ಮೈತ್ರಿ ಕಲಾ ಬಳಗದ ಸಹಯೋಗದಲ್ಲಿ ಗುರುವಾರ ಸಂಜೆ ತೇಲಂಗಾರಿನ ಮೈತ್ರಿ ಸಭಾಭವನದಲ್ಲಿ ಕಲಾ ಸನ್ನಿಧಿ ಪುರಸ್ಕಾರ ಹಾಗೂ ತಾಳಮದ್ದಲೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಪ್ರಸಿದ್ಧಿ, ಪ್ರಚಾರ ಹಾಗೂ ಗಳಿಕೆಯ ಆಕರ್ಷಣೆಗೆ ಒಳಗಾಗದೇ ಕಲಾ ಸೇವೆ ಮಾಡುತ್ತಿರುವ ಕಲಾವಿದರಾದ ಗಣೇಶ ಯಾಜಿ ಇಡಗುಂಜಿ, ಮಹಾಬಲೇಶ್ವರ ಭಟ್ಟ ಬೆಳಶೇರ, ಮಂಜುನಾಥ ಗಾಂವ್ಕರ ಮೂಲೆಮನೆ ಅವರಿಗೆ ‘ಕಲಾ ಸನ್ನಿಧಿ ಪುರಸ್ಕಾರ’ ಹಾಗೂ ವಿವೇಕ ಮರಾಠಿ ಅಂಕೋಲಾ ಅವರಿಗೆ ‘ಕಲಾ ಸನ್ನಿಧಿ ಯುವ ಪುರಸ್ಕಾರ’ ನೀಡಿ ಗೌರವಿಸಲಾಯಿತು.
ಪ್ರಸಿದ್ಧ ಭಾಗವತ ಅನಂತ ಹೆಗಡೆ ದಂತಳಿಗೆ ಕಾರ್ಯಕ್ರಮ ಉದ್ಘಾಟಿಸಿ, ಸಂಸ್ಥೆಯ ಕಾರ್ಯಗಳಿಗೆ ಶುಭ ಹಾರೈಸಿದರು. ಹವ್ಯಾಸಿ ಕಲಾವಿದ ನಾರಾಯಣ ಭಟ್ಟ ಮೊಟ್ಟೆಪಾಲ ಅಧ್ಯಕ್ಷತೆವಹಿಸಿ ಪ್ರೋತ್ಸಾಹದ ನುಡಿಗಳನ್ನಾಡಿದರು. ನಂತರ ಸ್ಥಳೀಯ ಮಕ್ಕಳನ್ನೊಳಗೊಂಡು ‘ಸುಧನ್ವ ಕಾಳಗ’ ತಾಳಮದ್ದಲೆ ಕಾರ್ಯಕ್ರಮ ನಡೆಯಿತು. ಸುತ್ತಮುತ್ತಲಿನ ಕಲಾಭಿಮಾನಿಗಳು, ಹಿರಿಯ ಕಲಾವಿದರು, ಕಲಾಸಕ್ತರು ಕಾರ್ಯಕ್ರಮಕ್ಕೆ ಸಾಕ್ಷಿಯಾದರು.