ಶಿರಸಿ: ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅನಾದಿಕಾಲದಿಂದ ಇರುವ ಕಂದಾಯ ಭೂಮಿ ಅತಿಕ್ರಮಣದಾರನನ್ನ ಬಲಪ್ರಯೋಗದಿಂದ, ಕಾನೂನಿಗೆ ವ್ಯತಿರಿಕ್ತವಾಗಿ, ಮಾನವೀಯತೆಯನ್ನು ಮೀರಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ ಸೋಮಯ್ಯ ಜೋಗಿ ತೀವ್ರ ಅಸ್ವಸ್ಥದ ಹಿನ್ನೆಲೆಯಲ್ಲಿ, ಚಿಕಿತ್ಸೆ ಫಲಕಾರಿಯಾಗದೇ ಮಂಗಳೂರಿನಲ್ಲಿ ಮೃತನಾಗಿದ್ದಾನೆ. ಈ ದುರ್ಘಟನೆಗೆ ಕಾರಣವಾದ ಕಂದಾಯ ಅಧಿಕಾರಿಯ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಸೋಮಯ್ಯ ಜೋಗಿ ಅನಾದಿಕಾಲದಿಂದಲೂ ದೊಡ್ನಳ್ಳಿ ಗ್ರಾಮ ಸರ್ವೇ ನಂ: 21 ಕಂದಾಯ ಭೂಮಿಯನ್ನ ಅತಿಕ್ರಮಿಸಿ, ಸಾಗುವಳಿ ಮಾಡಿಕೊಂಡು ಬರುತ್ತಿದ್ದು, ಅತಿಕ್ರಮಣ ಕ್ಷೇತ್ರದ ಮೇಲೆ ಅವಲಂಭಿತರಾಗಿದ್ದು ಇರುತ್ತದೆ. ಅಕ್ಟೋಬರ್ 7, 2023ರಂದು ಸ್ಥಳೀಯ ಕಂದಾಯ ಇಲಾಖೆಯ ಅಧಿಕಾರಿಗಳು ಕಂದಾಯ ಕಾಯಿದೆಯ ವಿಧಿ-ವಿಧಾನ ಅನುಸರಿಸದೇ, ಬಲಪ್ರಯೋಗದಿಂದ ಒಕ್ಕಲೆಬ್ಬಿಸುವ ಪ್ರಕ್ರಿಯೆಯ ಸಂದರ್ಭದಲ್ಲಿ ರೈತ ಸೋಮಯ್ಯ ಜೋಗಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಶಿರಸಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ, ಮಂಗಳೂರಿನ ಕೆ.ಎಸ್ ಹೆಗಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಮೃತ ಹೊಂದಿರುವುದು ಖೇದಕರ ಎಂದು ಅವರು ತಿಳಿಸಿದ್ದಾರೆ.
ಇಂತಹ ಘಟನೆಗಳ ಪುನರಾವರ್ತನೆ ಜರುಗದಂತೆ ಸರಕಾರ ತೀವ್ರ ನಿಗಾ ವಹಿಸಬೇಕೆಂದು ರವೀಂದ್ರ ನಾಯ್ಕ ಆಗ್ರಹಿಸಿದ್ದಾರೆ.