ಶಿರಸಿ: ಕಸ್ತೂರಿ ರಂಗನ್ ವರದಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಲ್ಪಟ್ಟ ಪ್ರದೇಶ ವ್ಯಾಪ್ತಿಯ ಲಕ್ಷ ಕುಟುಂಬದಿಂದ ವರದಿಗೆ ಆಕ್ಷೇಪಿಸಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಗೆ ಸಲ್ಲಿಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಪೂರ್ಣ ಪ್ರಮಾಣದ ಸಿದ್ಧತೆಗೊಂಡಿದೆ ಎಂದು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಕಸ್ತೂರಿ ರಂಗನ್ ವರದಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ 9 ತಾಲೂಕಿನ, 704 ಹಳ್ಳಿಗಳಲ್ಲಿ, 147 ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿನ ವರದಿಗೆ ಆಕ್ಷೇಪಿಸಿ ಹೋರಾಟಗಾರರ ವೇದಿಕೆ ಧುರೀಣರು ಮನೆ- ಮನೆಗೆ ತೆರಳಿ ಪ್ರತಿ ಕುಟುಂಬದಿಂದಲೂ ಉಚಿತವಾಗಿ ಆಕ್ಷೇಪಣೆ ಸಲ್ಲಿಸುವ ಪ್ರಕ್ರಿಯೆ ಜರುಗಿಸುವರೆಂದು ಅವರು ತಿಳಿಸಿದರು.
ಜಿಲ್ಲಾದ್ಯಂತ ಜರಗುವ ಮನೆ-ಮನೆಯಿಂದ ವರದಿಗೆ ಆಕ್ಷೇಪ ಸಲ್ಲಿಸುವ ಪ್ರಕ್ರಿಯೆಯಲ್ಲಿ ಐದು ಸಾವಿರಕ್ಕೂ ಮಿಕ್ಕಿ ಹೋರಾಟಗಾರರ ವೇದಿಕೆ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳುವರೆಂದು ಅವರು ಹೇಳಿದರು.
ಜನಜಾಗೃತಿ: ಹೋರಾಟಗಾರರ ವೇದಿಕೆಯ ತಂಡವು ಸಂಚರಿಸಿ, ವಿವಿಧ ತಾಲೂಕಿನ, ವಿವಿಧ ಹಳ್ಳಿಗಳಲ್ಲಿ ವರದಿ ಜ್ಯಾರಿಯಿಂದ ಅರಣ್ಯವಾಸಿಗಳಿಂದ ಉಂಟಾಗುವ ದುಷ್ಪರಿಣಾಮದ ಕುರಿತು ಸುಮಾರು ಐದನೂರಕ್ಕೂ ಮಿಕ್ಕಿ ಜನಜಾಗೃತೆ ಕಾರ್ಯಕ್ರಮ ಮತ್ತು ಶಿಬಿರಗಳನ್ನ ಸಂಘಟಿಸುವುದೊ0ದಿಗೆ, ಕಸ್ತೂರಿ ರಂಗನ್ ವರದಿಯ ಅವೈಜ್ಞಾನಿಕತೆ ಹಾಗೂ ವರದಿ ಜಾರಿಗೆ ಬಂದಲ್ಲಿ ಉಂಟಾಗುವ ದುಷ್ಪರಿಣಾಮದ ಕುರಿತು ಎರಡು ಲಕ್ಷ ಕರಪತ್ರ ವಿತರಿಸಲು ವೇದಿಕೆಯು ಸನ್ನದ್ಧವಾಗಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.