ಕಾರವಾರ: ಜಿಲ್ಲಾ ಗೃಹ ರಕ್ಷಕ ದಳದ ವತಿಯಿಂದ ಬೇರೆ ಬೇರೆ ತಾಲೂಕಿನ ವಿವಿಧ ಘಟಕದ 9 ಮಹಿಳಾ ಗೃಹರಕ್ಷಕಿಯರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿದ ಅಪರೂಪದ ಕಾರ್ಯಕ್ರಮ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು. ಮಹಿಳೆ ಮನೆ ಕೆಲಸ ಹಾಗೂ ಕುಟುಂಬವನ್ನು ನಿಭಾಯಿಸುತ್ತಾ ಸಾಮಾಜಿಕ ಬದ್ಧತೆ ಕಳಕಳಿ ಮತ್ತು ಕಾಳಜಿಯಿಂದ ಗೃಹರಕ್ಷಕಿಯಾಗಿ ಕೆಲಸ ಮಾಡುತ್ತಾ ಸಮಾಜ ಸೇವೆಯನ್ನು ಮಾಡುವುದು ಅತ್ಯಂತ ಪ್ರಶಂಸನೀಯ. ಅಂಥವರನ್ನು ಸನ್ಮಾನಿಸಿ ಗೌರವಿಸುತ್ತಿರುವ ಕೆಲಸ ಅಭಿನಂದನೀಯ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಅಭಿಪ್ರಾಯಪಟ್ಟರು.
ಗೃಹರಕ್ಷಕಿಯರಾದ ಮಂಗಳಾ ಎನ್.ಜೋಗಳೇಕರ್ ಶಿರಸಿ, ಗಿರಿಜಾ ಜಿ.ನಾಯ್ಕ್ ಕುಮಟಾ, ಸ್ಮಿತಾ ಗೌಡ ಮಲ್ಲಾಪುರ, ಸವಿತಾ ಗುನಗಿ ದಾಂಡೇಲಿ, ರೂಪಾ ಎಂ.ಬಾಂದಿ ಯಲ್ಲಾಪುರ, ಸಂಗೀತಾ ಗಾಂವಕರ ಅಂಕೋಲಾ, ಬೇಬಿ ಗೌಡ ಚೆಂಡಿಯಾ, ನಾಗರತ್ನ ಹುಲಸ್ವಾರ ಅಂಕೋಲಾ, ಕವಿತಾ ಎಸ್.ಗುನಗಿ ಕಾರವಾರ ಇವರುಗಳಿಗೆ ಸನ್ಮಾನ ಮಾಡಲಾಯಿತು.
ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಡಾ.ಸಂಜು ನಾಯಕರವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಎಲೆಮರೆಯ ಕಾಯಿಯಂತೆ ಕೆಲಸ ಮಾಡುವ ಗೃಹರಕ್ಷಕಿಯರನ್ನು ಗುರುತಿಸಿ ಗೌರವಿಸಿ ಮುನ್ನೆಲೆಗೆ ತರುವ ಕೆಲಸ ಸಮಾಜ ಮಾಡಬೇಕು ಎಂದು ಡಾ.ಸಂಜು ನಾಯಕ ಕರೆ ನೀಡಿದರು. ಈ ಸಂದರ್ಭದಲ್ಲಿ ಗೃಹರಕ್ಷಕದಳದ ಘಟಕಾಧಿಕಾರಿಗಳಾದ ರಾಘವೇಂದ್ರ ಗಾಂವ್ಕರ್ ಚೆಂಡಿಯಾ, ಪ್ರಭು ಮುದಕ್ಕಣ್ಣವರ ಮಲ್ಲಾಪುರ ಹಾಗೂ ವಿನಾಯಕ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.