ಶಿರಸಿ: ವನ್ಯಪ್ರಾಣಿಗಳ ಕೋಡು, ಉಗುರು, ಚರ್ಮ ಹೀಗೆ ಹಲವು ವಸ್ತುಗಳನ್ನ ಮನೆಯಲ್ಲಿ ಇಟ್ಟುಕೊಳ್ಳುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಿದೆ. ಸದ್ಯ ಅರಣ್ಯ ಇಲಾಖೆ ಅಂತವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು ಮನೆಯಲ್ಲಿ ಇಟ್ಟ ವಸ್ತುಗಳನ್ನು ಬಚ್ಚಿಡುವ ಪರಿಸ್ಥಿತಿಗೆ ಜನರು ಬಂದಿದ್ದಾರೆ ಎನ್ನಲಾಗಿದೆ.
ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಬಂಧನ ಮಾಡಿದ ನಂತರ ಹುಲಿ ಉಗುರನ್ನು ಸರಗಳಿಗೆ ಹಾಕಿಕೊಂಡವರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಹಿಂದಿನಿಂದಲೂ ಹುಲಿ ಉಗುರಿನಲ್ಲಿ ಸರಗಳಿಗೆ ಪೆಂಡೆಂಟ್ ಮಾಡಿ ಹಾಕಿ ಜನರಿಗೆ ತೋರಿಸಿಕೊಂಡು ಓಡಾಡವರ ಸಂಖ್ಯೆ ಹೆಚ್ಚಿದ್ದು ಹೀಗೆ ಪತ್ತೆಯಾದವರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದರು.
ನಟ ದರ್ಶನ್, ರಾಜ್ಯಸಭಾ ಸದಸ್ಯ ಜಗ್ಗೇಶ್, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ಮಾಡಿ ಹುಲಿ ಉಗುರನ್ನ ವಶಕ್ಕೆ ಪಡೆಯುವ ಜೊತೆಗೆ ಕಾನೂನು ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಇನ್ನು ಅರಣ್ಯ ಸಂಪತ್ತನ್ನೇ ಹೆಚ್ಚು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಪ್ರಕರಣ ಹೆಚ್ಚಾಗಿಯೇ ಇದೆ. ಅಂಕೋಲಾ ಮೂಲದ ಉದ್ಯಮಿಯೋರ್ವರು ಹುಲಿ ಉಗುರಿನ ಪೆಂಡೆಂಟ್ ಹಾಕಿಕೊಂಡು ಓಡಾಡುತ್ತಿದ್ದರು ಎನ್ನಲಾಗಿದೆ. ಇನ್ನು ಯಲ್ಲಾಪುರದಲ್ಲಿ ಸಹ ಪ್ರಭಾವಿ ರಾಜಕಾರಣಿಯೋರ್ವರ ಆಪ್ತನ ಪುತ್ರರೊಬ್ಬರು ಹುಲಿ ಉಗುರು ಹಾಕಿಕೊಂಡ ಫೋಟೋ ವೈರಲ್ ಮಾಡಲಾಗಿದೆ.
ಇದು ಒಂದೆರಡು ಪ್ರಕರಣ ಮಾತ್ರವಲ್ಲ, ಹೀಗೆ ಹುಲಿ ಚಿರತೆ ಉಗರನ್ನ ಪೆಂಡೆಂಟ್ ಮಾಡಿಕೊಂಡು ಸರಕ್ಕೆ ಹಾಕಿಕೊಂಡು ಓಡಾಡುವವರ ಸಂಖ್ಯೆ ಜಿಲ್ಲೆಯಲ್ಲಿ ಹೆಚ್ಚಾಗಿಯೇ ಇದೆ. ಇದಲ್ಲದೇ ಕಾಡು ಪ್ರಾಣಿಗಳ ಕೋಡನ್ನ ಮನೆಯಲ್ಲಿ ಇಟ್ಟುಕೊಳ್ಳುವುದು, ಪ್ರಾಣಿಯ ಚರ್ಮವನ್ನ ಇಟ್ಟುಕೊಳ್ಳುವುದು ಹೀಗೆ ಹಲವರು ವನ್ಯಜೀವಿಯ ವಸ್ತುಗಳನ್ನ ಇಟ್ಟುಕೊಂಡಿದ್ದಾರೆ.
ಸದ್ಯ ಅರಣ್ಯ ಇಲಾಖೆ ಅಧಿಕಾರಿಗಳು ಇಂತಹ ವನ್ಯಜೀವಿಗಳ ವಸ್ತುಗಳನ್ನ ಇಟ್ಟುಕೊಂಡಿರುವವರ ಬೆನ್ನಿಗೆ ಬಿದ್ದಿದ್ದು ಅಧಿಕೃತವಾಗಿ ದೂರು ಬಂದರೆ ಇಲ್ಲದಿದ್ದರೇ ಮಾಹಿತಿ ಸಿಕ್ಕರೆ ಅಂತವರ ಮನೆಯ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕೆಲವೆಡೆ ದೂರುಗಳು ಬಂದಿದ್ದು ಅರಣ್ಯ ಇಲಾಖೆಯವರು ಅಲರ್ಟ್ ಆಗಿದ್ದು ಜಿಲ್ಲೆಯಲ್ಲಿ ದೊಡ್ಡ ಮಟ್ಟದಲ್ಲಿಯೇ ಅರಣ್ಯ ಉತ್ಪನ್ನ ಇಟ್ಟುಕೊಂಡವರ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ವನ್ಯಜೀವಿ ಕಾಯಿದೆಯಲ್ಲಿ ಏನಿದೆ…?
ವನ್ಯಜೀವಿಗಳ ಸಂರಕ್ಷಣಾ ಕಾಯಿದೆ 1972ರ ಪ್ರಕಾರ ವನ್ಯಜೀವಿಗಳನ್ನ ಉಳಿಸುವ ನಿಟ್ಟಿನಲ್ಲಿ ಕಠಿಣ ಕಾನೂನನ್ನ ಜಾರಿಗೆ ತಂದಿದೆ. ಜೀವಂತವಾಗಿ ಅಥವಾ ಮೃತಪಟ್ಟ ವನ್ಯಜೀವಿ ಮಾರಾಟ ಮಾಡುವಂತಿಲ್ಲ, ಅಲ್ಲದೇ ವನ್ಯಜೀವಿಯ ಮಾಂಸ ಮಾರಾಟ, ತಿನ್ನುವುದು ಅಪರಾಧವಾಗಿದೆ. ಇನ್ನು ಯಾವುದೇ ವನ್ಯಜೀವಿಯ ಕೊಂಬು, ಚರ್ಮ, ಉಗುರು, ಗೊರಸು, ಹಲ್ಲುಗಳ ಸಂಗ್ರಹ, ಅವುಗಳಿಂದ ತಯಾರಿಸಿದ ಅಲಂಕಾರಿಕ ವಸ್ತುಗಳನ್ನ ಮಾರಾಟ ಮಾಡುವುದು, ಧರಿಸುವುದು ಶಿಕ್ಷಾರ್ಹ ಎನ್ನುವುದು ಕಾಯಿದೆಯಲ್ಲಿ ಹೇಳಲಾಗಿದೆ.
ಯಾರೇ ಇರಲಿ ಕಠಿಣ ಕ್ರಮ ಕೈಗೊಳ್ಳುತ್ತೇವೆ: ವಸಂತ್ ರೆಡ್ಡಿ
ವನ್ಯಜೀವಿಗಳಿಂದ ತಯಾರಿಸಿದ ಅಲಂಕಾರಿಕ ವಸ್ತುಗಳನ್ನ ಹಾಕಿಕೊಳ್ಳುವುದು, ಮನೆಯಲ್ಲಿ ಇಟ್ಟುಕೊಳ್ಳುವುದು ತಪ್ಪು. ಈ ಬಗ್ಗೆ ಯಾರೇ ಆಗಲಿ ಮಾಹಿತಿ ಬಂದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಕೆನರಾ ಅರಣ್ಯ ವಲಯದ ಸಿಸಿಎಫ್ ವಸಂತ್ ರೆಡ್ಡಿ ಹೇಳಿದ್ದಾರೆ.
ವನ್ಯಜೀವಿ ಸಾಯಿಸುವುದು, ಮಾಂಸ ಮಾರಾಟ ಮಾಡುವುದು, ಉಗುರು, ಇನ್ನಿತರ ವಸ್ತುಗಳನ್ನ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿ ಇಟ್ಟುಕೊಂಡರೇ ಅರಣ್ಯ ಇಲಾಖೆಗೆ ಮಾಹಿತಿ ಬಂದರೆ ಇರುವುದು ಖಚಿತವಾದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.
ವನ್ಯಜೀವಿಗಳ ಸಂರಕ್ಷಣೆಗೆ ಜನರು ಅರಣ್ಯ ಇಲಾಖೆಯವರ ಜೊತೆ ಕೈಜೋಡಿಸಬೇಕು. ಇಂತಹ ಅಲಂಕಾರಿಕ ವಸ್ತುಗಳನ್ನ ಹಾಕಿಕೊಳ್ಳುವುದರಿಂದ ವನ್ಯಜೀವಿಗಳ ಹತ್ಯಗೆ ಪ್ರಚೋದನೆ ನೀಡಿದಂತಾಗುತ್ತದೆ. ಅರಣ್ಯ ಇಲಾಖೆ ವನ್ಯಜೀವಿಗಳ ರಕ್ಷಣೆಗೆ ಸದಾ ಬದ್ದವಾಗಿದೆ ಎಂದು ವಸಂತ್ ರೆಡ್ಡಿ ತಿಳಿಸಿದ್ದಾರೆ.