ಹಳಿಯಾಳ: ಕಬ್ಬು ಬೆಳೆಗಾರರ ಸಂಘ ಕರೆ ನೀಡಿದ್ದ ಹಳಿಯಾಳ ಬಂದ್‌ಗೆ ಬೆಂಬಲಿಸಿ ಅಳ್ನಾವರ, ಕಲಘಟಗಿ, ಧಾರವಾಡ ಮತ್ತು ತಾಲೂಕಿನ ಗ್ರಾಮೀಣ ಭಾಗದ ರೈತರು ಆಗಮಿಸಿ ಬಂದ್‌ಗೆ ಬೆಂಬಲ ಸೂಚಿಸಿದರು.
ವನಶ್ರೀ ವೃತ್ತದಿಂದ ಬಸ್ ನಿಲ್ದಾಣದ ರಸ್ತೆ ಮೂಲಕ ಸಾಗಿ ಅರ್ಬನ್ ಬ್ಯಾಂಕ್ ವೃತ್ತದ ಮೂಲಕ ಮುಖ್ಯ ಮಾರುಕಟ್ಟೆ ರಸ್ತೆಯಿಂದ ಶಿವಾಜಿ ವೃತ್ತದಲ್ಲಿ ಸೇರಿ ಒಂದು ತಾಸಿಗಿಂತಲೂ ಹೆಚ್ಚಿನ ಸಮಯ ರಸ್ತಾ ರೋಖೋ ನಡೆಸಿ ಉರಿ ಬಿಸಿಲಿನಲ್ಲಿ ಪ್ರತಿಭಟನೆ ನಡೆಸಿದರು.
ಇದೇವೇಳೆ ಮಾತನಾಡಿದ ಹಿರಿಯ ರೈತ ಮುಖಂಡ ನಾಗೇಂದ್ರ ಜಿವೋಜಿ, ಕಳೆದ ವರ್ಷ ಸತತ 58 ದಿನಗಳ ಕಾಲ ಕಬ್ಬು ಬೆಳೆಗಾರರ ಸಂಘದ ಅಡಿಯಲ್ಲಿ ಪ್ರತಿಭಟನೆ ಮಾಡಿ ನಂತರ ಸಕ್ಕರೆ ಆಯುಕ್ತರ ಅಧ್ಯಕ್ಷತೆಯಡಿ ಕಾರವಾರದಲ್ಲಿ ನಡೆದ ಸಭೆಯಲ್ಲಿ ಎಚ್ ಎಂಡ್ ಟಿ ಆಕರಣೆಗೆ ಸಂಬಂಧಿಸಿ ಚರ್ಚೆ ನಡೆದು ಸಮಿತಿ ರಚನೆಗೆ ನಿರ್ಣಯವಾಗಿತ್ತು. ಸಮಿತಿಯಿಂದ ಆಡಿಟ್ ಮಾಡಿಸಿ ಪ್ರತಿ ಟನ್‌ಗೆ 893 ರೂ.ಗಳು ಹೆಚ್ಚಾಗಿದ್ದು, ಹೆಚ್ಚುವರಿ ಆಕರಣೆಯಾಗಿರುವ ಹಣವನ್ನು ಕಡಿಮೆ ಮಾಡಿಸುವ ಭರವಸೆ ಮತ್ತು ರಾಜ್ಯ ಸರ್ಕಾರ ಘೋಷಿಸಿದ್ದ ರಾಜ್ಯ ಸಲಹಾ ಬೆಲೆ ಪ್ರತಿ ಟನ್‌ಗೆ 150 ಇದುವರೆಗೆ ಬಾಕಿಯಿದ್ದು, ರಾಜ್ಯಾದ್ಯಂತ 980 ಕೋಟಿ ರೂ.ಗಳ ಬಾಕಿ ಇದೆ. ತಾಲೂಕೊಂದರ ಬಾಕಿಯೇ 16 ಕೋಟಿಗೂ ಮಿಗಿಲಾಗಿದೆ. ಇದಕ್ಕೂ ಮೊದಲು ಪ್ರತಿ ಟನ್‌ಗೆ 305 ರೂ.ಗಳ ಬಾಕಿ ಇದ್ದು, ಸರ್ಕಾರ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ. ರೈತರೆಂದರೆ ರಾಜಕಾರಣಿಗಳಿಗೆ ತಿರಸ್ಕಾರ ಭಾವನೆಯಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಾಲೂಕಾ ಕಾರ್ಯದರ್ಶಿ ಅಶೋಕ ಮೇಟಿ ಮಾತನಾಡಿ, ರೈತರಲ್ಲಿ ಜಾಗೃತಿಯ ಕೊರತೆಯಿದೆ. ಕಾರ್ಖಾನೆಯವರು ರೈತರನ್ನು ಪುಸಲಾಯಿಸಿ ಕಬ್ಬು ಕಟಾವು ಮಾಡಿಸಿದ್ದೇ ಆದಲ್ಲಿ ಮುಂದೆ ಆಗಬಹುದಾದ ಯಾವುದೇ ಅಹಿತಕರ ಘಟನೆಗಳಿಗೆ ಹೋರಾಟ ಸಮಿತಿಯವರು ಜವಾಬ್ದಾರರಲ್ಲ ಎಂದರು. ತಾಲೂಕು ಅಧ್ಯಕ್ಷ ಶಂಕರ ಕಾಜಗಾರ, ರೈತರ ಬೇಡಿಕೆ ಈಡೇರಿಸಿದ ನಂತರ ಕಾರ್ಖಾನೆ ಪ್ರಾರಂಭಿಸಬೇಕು. ಒಂದುವೇಳೆ ಕಾರ್ಖಾನೆ ಪ್ರಾರಂಭಿಸಿದರೆ ಏನಾದರೂ ಅನಾಹುತಗಳು ಸಂಭವಿಸಿದಲ್ಲಿ ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತ ನೇರ ಹೊಣೆ ಎಂದರು.
ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ನಿಜಗುಣಿ ಕೆಲಗೇರಿ,ಪರಶುರಾಮ ಯತ್ತಿನಗುಢ್ಢ, ಉಳವಪ್ಪ ಬಳಗೇರ, ಎಮ್ ವಿ ಘಾಡಿ, ನಕುಲ ಕೆಂಚಣ್ಣವರ, ಸಹದೇವ ಗೋಣಿ, ಮಾರುತಿ ಗೌಡ, ಮಾರುತಿ ಭಾವಕರ,ಯಲ್ಲಪ್ಪ ಮುರಗುಣಿ, ಲಕ್ಷ್ಮಣ ಪಾಟೀಲ, ಸುಭಾಸ ಗೌಡ, ನಾರಾಯಣ ಮಿರಾಶಿ, ಪುಂಡ್ಲೀಕ ಗೋಡಿಮನಿ,ಸಾತೋರಿ ಗೋಡಿಮನಿ, ಮಂಜುನಾಥ ಬೆಟದೋಳಕರ, ಮಹಾದೇವ ಮತ್ತು ಹನುಮಂತ ಜಾಲಗಾರ ಮತ್ತಿತರ ರೈತರು ಇದ್ದರು.