ಹಳಿಯಾಳ: ಸಂವಹನ ಕ್ಷೇತ್ರದಲ್ಲಿ 5ಜಿ ತಂತ್ರಜ್ಞಾನವು ಹೊಸ ಅಲೆಯನ್ನೆ ಸೃಷ್ಟಿಸಿದೆ ಎಂದು ಎರಿಕ್ಸನ್ ಗ್ಲೋಬಲ್ ಇಂಡಿಯಾದ ಶಂಕನಗೌಡರ್ ಹೇಳಿದರು.
ಪಟ್ಟಣದ ಕೆಎಲ್‌ಎಸ್ ವಿಡಿಐಟಿ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗವು ಆಯೋಜಿಸಿದ್ದ 4ಜಿ ಹಾಗೂ 5ಜಿ ತಂತ್ರಜ್ಞಾನದ ಮಹತ್ವ ತಿಳಿಸುವ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಉಪನ್ಯಾಸ ನೀಡಿದರು.
5ಜಿ ತಂತ್ರಜ್ಞಾನವು 4ಜಿಗಿಂತ ಹೆಚ್ಚಿನ ವೈಶಿಷ್ಟ್ಯತೆ ಹೊಂದಿದೆ. 5ಜಿ ತಂತ್ರಜ್ಞಾನದಲ್ಲಿ ದತ್ತಾಂಶದ ಅಪ್ಲೋಡ್ ಮತ್ತು ಡೌನ್ಲೋಡ್ ವೇಗವನ್ನು ಹೇಗೆ ಹೆಚ್ಚಿಸಲಾಗಿದೆ ಎಂದು ವಿವರಿಸಿದರು. 5ಜಿ ತಂತ್ರಜ್ಞಾನಕ್ಕೆ ಪೂರಕವಾಗಲು ಸಂವಹನ ಉಪಕರಣಗಳಲ್ಲಿ ಮಾಡಲಾಗಿರುವ ಬದಲಾವಣೆಯನ್ನು ತಿಳಿಸಿದರು. ಶಂಕನಗೌಡರ್ ಮಹಾವಿದ್ಯಾಲಯದ ಇ ಅಂಡ್ ಸಿ ವಿಭಾಗದಲ್ಲಿ 2006ರಿಂದ 2010ರವರೆಗೆ ವ್ಯಾಸಂಗ ಮಾಡಿದ್ದಾರೆ.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ವಿ.ಎ.ಕುಲಕರ್ಣಿ, ವಿದ್ಯಾರ್ಥಿಗಳು ಸಂವಹನ ಕ್ಷೇತ್ರದಲ್ಲಿ ಬಳಸಲಾಗುತ್ತಿರುವ ವಿನೂತನ ತಂತ್ರಜ್ಞಾನದ ಅರಿವು ಹೊಂದುವುದು ಅತ್ಯವಶ್ಯಕವಾಗಿದೆ ಎಂದರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದ ಮುಖ್ಯಸ್ಥ ಡಾ.ಮಹೇಂದ್ರ ದೀಕ್ಷಿತ್ ಸ್ವಾಗತಿಸಿ ವಿನೂತನ ತಂತ್ರಜ್ಞಾನಕ್ಕೆ ಸಂವಹನದ ಮೂಲಭೂತ ಪರಿಕಲ್ಪನೆಯನ್ನು ಹೊಂದುವುದು ಒಂದು ಕನಿಷ್ಠ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಪ್ರೊ.ಪ್ಲಾಸಿನ್ ಡಯಾಸ್ ಮತ್ತು ಪ್ರೊ.ಶ್ರೀಗೌರಿ ಕಾರ್ಯಕ್ರಮ ಸಂಯೋಜಿಸಿದರು. ಸಂವಹನ ಕ್ಷೇತ್ರದಲ್ಲಿನ ನೂತನ ತಂತ್ರಜ್ಞಾನದ ಕುರಿತು ಅರಿವು ಮೂಡಿಸುವ ಉಪನ್ಯಾಸ ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.