ಸಿದ್ದಾಪುರ: ಶರವನ್ನವರಾತ್ರಿ ಸಂಸ್ಕೃತಿ ಸಂಪದೋತ್ಸವದ ಪ್ರಯುಕ್ತ ಸುಷಿರ ಸಂಗೀತ ಪರಿವಾರದ ಸಹಯೋಗದಲ್ಲಿ ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಅಂತಾರಾಷ್ಟ್ರೀಯ ಗಾಯಕ, ಮೂಲತಃ ಜೊಯಿಡಾ ತಾಲೂಕಿನ ಗುಂದದವರಾದ ಗಣೇಶ ದೇಸಾಯಿ ಬೆಂಗಳೂರು ಅವರ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡದ ಭಗವದ್ಗೀತೆ ಎಂದೇ ಕರೆಸಿಕೊಳ್ಳುವ ಡಿವಿಜಿಯವರ ಮಂಕುತಿಮ್ಮನ ಕಗ್ಗ, ಕನಕದಾಸರು, ಪುರಂದರ ದಾಸರು, ಜಗನ್ನಾಥದಾಸರುಗಳ ಭಕ್ತಿಗೀತೆಗಳು ಅಮೂಲ್ಯವಾದ ಸಾಹಿತ್ಯವನ್ನು ಹೊಂದಿರುವಂಥದ್ದು. ಕೇಳುಗರಿಗೆ ಭಕ್ತಿಸ್ಪರ್ಶದ ಜೊತೆಗೆ ಅರಿವನ್ನೂ ನೀಡುವಂಥದ್ದು ಎಂದರು. ಅವರು ಮಂಕುತಿಮ್ಮನ ಕಗ್ಗ, ಕನಕದಾಸರು,ಪುರಂದರ ದಾಸರು,ಜಗನ್ನಾಥದಾಸರುಗಳ ಭಕ್ತಿಗೀತೆಗಳನ್ನು ಹಾಡಿದರು. ಅವರೊಟ್ಟಿಗೆ ಇನ್ನೊರ್ವ ಅಂತಾರಾಷ್ಟ್ರೀಯ ಬಾನ್ಸುರಿವಾದಕ ಪ್ರಕಾಶ ಹೆಗಡೆ ಕಲ್ಲಾರೆಮನೆ, ಉದಯೋನ್ಮುಖರಾದರೂ ಈಗಾಗಲೇ ಸಾಕಷ್ಟು ಪ್ರಸಿದ್ಧಿಹೊಂದಿರುವ ತಬಲಾವಾದಕ ಕಾರ್ತೀಕ ಭಟ್ ಬೆಂಗಳೂರು ಬಾನ್ಸುರಿ ಹಾಗೂ ತಬಲಾ ಸಹಕಾರ ನೀಡಿದರು.
ಈ ಕಲಾವಿದರುಗಳಿಗೆ ಶಂಕರಮಠದ ಧರ್ಮಾಧಿಕಾರಿ ದೊಡ್ಮನೆ ವಿಜಯ ಹೆಗಡೆ, ಸುಷಿರ ಸಂಗೀತ ಪರಿವಾರದ ಅಧ್ಯಕ್ಷ ನಾರಾಯಣ ಹೆಗಡೆ ಕಲ್ಲಾರೆಮನೆ ಗೌರವಿಸಿದರು. ನಾರಾಯಣ ಹೆಗಡೆ ಕಲ್ಲಾರೆಮನೆ ಸ್ವಾಗತಿಸಿದರು. ಧಾತ್ರಿ ಹೆಗಡೆ ಹಿತ್ಲಕೈ ಪರಿಚಯಿಸಿದರು. ಗಣಪತಿ ಹೆಗಡೆ ಹಿತ್ಲಕೈ ವಂದಿಸಿದರು.