Slide
Slide
Slide
previous arrow
next arrow

ಕಾಂಗ್ರೆಸ್ಸಿಗರ ಕೃಪೆಯಲ್ಲೇ ಮರಳು ಮಾಫಿಯಾ: ರೂಪಾಲಿ ನಾಯ್ಕ

300x250 AD

ಕಾರವಾರ: ವಶಪಡಿಸಿಕೊಂಡ ಅಕ್ರಮ ಮರಳನ್ನು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಕಾನೂನು ಬಾಹಿರವಾಗಿ ಗುತ್ತಿಗೆದಾರರು ಹಾಗೂ ಬಿಲ್ಡರ್ ಗಳಿಗೆ ಮಾರಾಟ ಮಾಡಿರುವ ಪ್ರಕರಣದ ಸೂಕ್ತ ತನಿಖೆ ನಡೆಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ.

ಕಾಂಗ್ರೆಸ್ ಮುಖಂಡರ ಆಶೀರ್ವಾದದಿಂದಲೆ ಕಾರವಾರದಲ್ಲಿ ಮರಳು ಮಾಫಿಯಾ ತಲೆ ಎತ್ತುತ್ತಿದೆ. ಕಾನೂನು ಪಾಲಿಸಬೇಕಾದ ಅಧಿಕಾರಿಗಳು ಬೇಲಿಯೇ ಎದ್ದು ಹೊಲ ಮೇಯ್ದಂತೆ ಈ ಪ್ರಕರಣದಿಂದ ಮರಳು ಮಾಫಿಯಾದೊಂದಿಗೆ ಕೈಜೋಡಿಸಿದ್ದಾರೆಯೇ ಎಂಬ ಅನುಮಾನ ಉಂಟಾಗುತ್ತಿದೆ.

ಕಾರವಾರದ ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಕಾಳಿ ನದಿ ತೀರದಲ್ಲಿ ಸೆಪ್ಟೆಂಬರ್ 13ರಂದು ವಶಪಡಿಸಿಕೊಂಡ ಅಕ್ರಮ ಮರಳನ್ನು ಗಣಿ ಹಾಗೂ ಭೂ ವಿಜ್ಞಾನ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದರೆ ಈ ಇಲಾಖೆಯ ಅಧಿಕಾರಿ ಕಾನೂನನ್ನು ಗಾಳಿಗೆ ತೂರಿ ತರಾತುರಿಯಲ್ಲಿ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮರಳನ್ನು ಕೇವಲ 30-35 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಇದು ಸಹಾಯಕ ಆಯುಕ್ತರ ಗಮನಕ್ಕೆ ಇದೆಯೇ ಇಲ್ಲವೇ ಎನ್ನುವುದೂ ತಿಳಿಯಬೇಕಾಗಿದೆ. ಮರಳು ಮಾರಾಟದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ್ದಲ್ಲದೆ, ಭ್ರಷ್ಟಾಚಾರದ ಸಾಧ್ಯತೆಯನ್ನೂ ಹುಟ್ಟುಹಾಕಿದೆ. ಬಿಲ್ಡರ್ ಒಬ್ಬರ ಜೊತೆ ಸೇರಿಕೊಂಡು ಗುತ್ತಿಗೆದಾರರೊಬ್ಬರಿಗೆ ಮರಳು ಮಾರಾಟ ಮಾಡಿರುವದರ ಹಿಂದೆ ಕಾಂಗ್ರೆಸ್ ಮುಖಂಡರೇ ಶಾಮೀಲಾಗಿರುವ ಆರೋಪ ಕೇಳಿಬರುತ್ತಿದೆ. ಅದಿಲ್ಲದಿದ್ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರನ್ನು ಬಹಿರಂಗಪಡಿಸಿ ಸೂಕ್ತ ಕ್ರಮಕ್ಕೆ ಒಳಪಡಿಸಬೇಕು.

300x250 AD

ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಬಡ ಜನತೆ ಮರಳು ಸಿಗದೆ ಪರದಾಡುತ್ತಿದ್ದಾರೆ. ನಿಷೇಧದ ನೆಪದಲ್ಲಿ ಅಧಿಕಾರಿಗಳು ಮರಳು ಮಾಫಿಯಾದೊಂದಿಗೆ ಸೇರಿಕೊಂಡು ವ್ಯವಹಾರಕ್ಕಿಳಿದಿದ್ದಾರೆ. ಜನಪ್ರತಿನಿಧಿಗಳು ಇರುವಾಗ ಅವರ ಕುಮ್ಮಕ್ಕಿಲ್ಲದೆ ಅಧಿಕಾರಿಗಳು ರಾಜಾರೋಷವಾಗಿ ಈ ರೀತಿ ಮರಳನ್ನು ಮಾರಾಟ ಮಾಡಲು ಸಾಧ್ಯವೇ. ಹಾಗಿದ್ದರೆ ಇದಕ್ಕೆ ಯಾರೆಲ್ಲ ಕುಮ್ಮಕ್ಕು ನೀಡಿದ್ದಾರೆ. ಯಾರ ಕೃಪೆ ಇದೆ ಎನ್ನುವುದು ಹೊರಬೀಳಲಿ ಜಿಲ್ಲಾಧಿಕಾರಿಗಳು ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದೂ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ.

ಮರಳು ಮಾಫಿಯಾದಿಂದ ಸರ್ಕಾರದ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸುವವರಿಗೆ, ಬಡವರಿಗೆ ತೀವ್ರ ಸಮಸ್ಯೆ ಉಂಟಾಗಿದೆ. ಉಳ್ಳವರಿಗೆ ರಾತ್ರೋ ರಾತ್ರಿ ಮರಳನ್ನು ಕಡಿಮೆ ಹಣಕ್ಕೆ ಮರಳು ಮಾರಾಟ ಮಾಡುವ ಅಧಿಕಾರಿಗಳು ಬಡವರ ಮೇಲೆ ಮಾತ್ರ ಕಾನೂನು ಹೇರುತ್ತಿದ್ದಾರೆ. ನಾನು ಶಾಸಕಿಯಾಗಿದ್ದಾಗ ಸಾರ್ವಜನಿಕರಿಗೆ ಮರಳು ದೊರೆಯುವಂತೆ ಮಾಡಲು ಅಂದಿನ ಮುಖ್ಯಮಂತ್ರಿಗಳು, ಗಣಿ ಹಾಗೂ ಭೂವಿಜ್ಞಾನ ಸಚಿವ ಹಾಲಪ್ಪ ಆಚಾರ್, ಜಿಲ್ಲಾಧಿಕಾರಿಗಳೊಂದಿಗೂ ಸಭೆ ನಡೆಸಿದ್ದೆ. ಕಾಳಿ ನದಿಯಲ್ಲಿ ಸಿಆರ್ ಝಡ್ ವಲಯದ ಬಗ್ಗೆ ಪುನಃ ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದ್ದೆ. ಈಗಲೂ ಕಾಳಿ ನದಿಯಲ್ಲಿ ಸಿಆರ್ ಝಡ್ ಕುರಿತು ಪುನಃ ಸಮೀಕ್ಷೆ ನಡೆಯಬೇಕಾಗಿದೆ. ಬಡವರಿಗೆ ಮರಳು ದೊರೆಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Share This
300x250 AD
300x250 AD
300x250 AD
Back to top