ಕಾರವಾರ: ಇತ್ತೀಚಿಗೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚುತ್ತಲೇ ಇದೆ. ಪೊಲೀಸ್ ಇಲಾಖೆ ಎಷ್ಟೇ ಎಚ್ಚರಿಕೆ ಮೂಡಿಸಿದರು ಜನತೆ ವಂಚನೆಗೊಳಗಾವುದು ಮಾತ್ರ ಕಡಿಮೆಯಾಗುತ್ತಿಲ್ಲ. ಕಳೆದ ಎರಡು ವರ್ಷದಲ್ಲಿ ಜಿಲ್ಲೆಯ ಜನತೆ ಸುಮಾರು 1.64 ಕೋಟಿಗೆ ಅಧಿಕ ಹಣ ಸೈಬರ್ ವಂಚನೆಯಿoದ ಕಳೆದುಕೊಂಡಿದ್ದಾರೆ.
ಸೈಬರ್ ಕ್ರೈಂ ಇತ್ತೀಚಿನ ದಿನದಲ್ಲಿ ಪೊಲೀಸರಿಗೆ ದೊಡ್ಡ ತಲೆನೋವಾಗಿರುವ ವಿಚಾರವಾಗಿದೆ. ಪ್ರತಿ ದಿನ ಒಂದಲ್ಲಾ ಒಂದು ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಜಿಲ್ಲೆಯಲ್ಲಿ ಸಹ ಸೈಬರ್ ವಂಚನೆ ಪ್ರಕರಣ ಹೆಚ್ಚಾಗಿದ್ದು 2022 ನೇ ಸಾಲಿಗಿಂತ 2023ರಲ್ಲಿ ಜನ ಹಣ ಕಳೆದುಕೊಂಡ ಮೊತ್ತ ಹೆಚ್ಚಾಗಿದೆ. ಮೊಬೈಲ್ ನಲ್ಲಿ ಓಟಿಪಿ ಕಳಿಸಿ ವಿವಿಧ ವಿಚಾರದಲ್ಲಿ ವಿಚಾರಣೆ ಮಾಡಿ ಓಟಿಪಿ ಪಡೆದು ವಂಚನೆಯನ್ನ ಮಾಡಲಾಗುತ್ತದೆ. ಅಲ್ಲದೇ ಎಟಿಎಂ ಕಾರ್ಡ್ ಹಾಳಾಗಿದೆ ಎಂದು ಸಹ ವಂಚಿಸುವ ಪ್ರಕರಣ ನಡೆಯುತ್ತದೆ. ಇದಲ್ಲದೇ ಜಾಬ್ ಕೊಡಿಸಲಾಗುವುದು, ಗಿಫ್ಟ್ ಬಂದಿದ್ದು ಪಡೆಯುವಂತೆ ಹೇಳಿ ಹಣ ಪಡೆಯುವುದು. ಆನ್ ಲೈನ್ ನಲ್ಲಿ ಬ್ಯುಸಿನೆಸ್ ಅಂತಾ ಹಣ ವಂಚಿಸುವುದು. ಕೆವೈಸಿ ಅಪ್ ಡೇಟ್ ಎಂದು ಅಕೌಂಡ್ ಡಿಟೈಲ್ ಪಡೆದು ವಂಚಿಸುವುದು ಹೀಗೆ ಒಂದಲ್ಲಾ ಎರಡಲ್ಲ ನಾನಾ ಬಗೆಯ ವಂಚನೆಗಳು ನಡೆಯುತ್ತಿದೆ.
ಜಿಲ್ಲೆಯಲ್ಲಿ 2022ನೇ ಸಾಲಿನಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಜನರು ವಿವಿಧ ವಂಚನೆ ಪ್ರಕರಣದಲ್ಲಿ ಸುಮಾರು 43 ಲಕ್ಷ ಹಣ ಕಳೆದುಕೊಂಡಿದ್ದಾರೆ. ಇನ್ನು 2023ನೇ ಸಾಲಿನಲ್ಲಿ ಅಕ್ಟೋಬರ್ ತಿಂಗಳ ವರೆಗೆ ಸುಮಾರು 1.21 ಕೋಟಿ ಹಣವನ್ನ ಜನರು ವಿವಿಧ ಪ್ರಕರಣದಲ್ಲಿ ಕಳೆದುಕೊಂಡಿದ್ದು, ಒಂದೇ ವರ್ಷದಲ್ಲಿ ದುಪ್ಪಟ್ಟು ಹಣ ಕಳೆದುಕೊಂಡಿದ್ದಾರೆ. ಇನ್ನು ಸೈಬರ್ ವಂಚನೆಗೊಳಗಾದ ಪ್ರಕರಣದಲ್ಲಿ ಯುವಕರೇ ಹೆಚ್ಚಾಗಿದ್ದು ಸಿಇಎನ್ ಪೊಲೀಸ್ ಠಾಣೆಯೊಂದರಲ್ಲಿ ಕೋಟಿಗೂ ಅಧಿಕ ಹಣ ಕಳೆದುಕೊಂಡರೇ ಇತರೇ ಪೊಲೀಸ್ ಠಾಣೆಗಳಲ್ಲಿ ಹಾಗೂ ಆನ್ ಲೈನ್ ಮೂಲಕ ದಾಖಲಾದ ದೂರುಗಳೆಲ್ಲಾ ಸೇರಿ ಜಿಲ್ಲೆಯಲ್ಲಿ 2 ಕೋಟಿಗೂ ಅಧಿಕ ಹಣ ಜನರು ಆನ್ ಲೈನ್ ವಂಚನೆ ಮಾಡಿದ್ದಾರೆ.
ಜಿಲ್ಲೆಯಲ್ಲಿ ಇತರೇ ಕ್ರೈಂ ಪ್ರಕರಣಗಳಿಗೆ ಹೋಲಿಸಿದರೆ ಇತ್ತಿಚ್ಚಿಗೆ ಸೈಬರ್ ಕ್ರೈಂ ಗಳು ಸಹ ಸಾಕಷ್ಟು ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾಗುತ್ತಿದೆ. ಜಿಲ್ಲೆಯ ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರು ಹಣ ಒಂದಲ್ಲಾ ಒಂದು ಮಾರ್ಗದಲ್ಲಿ ಜನರಿಂದ ವಂಚಕರು ವಂಚನೆ ಮಾಡುತ್ತಿರುವುದು ಪೊಲೀಸರಿಗೆ ತಲೆ ನೋವಾದ ವಿಚಾರವಾಗಿದೆ.