Slide
Slide
Slide
previous arrow
next arrow

ಅಸುರ ಸಂಹಾರಕ್ಕೆ ತ್ರಿಪುರಸುಂದರಿಗೆ ಮೋಹವೇ ಅಸ್ತ್ರ: ರಾಘವೇಶ್ವರ ಶ್ರೀ

300x250 AD

ಮಂಗಳೂರು: ಧರ್ಮರಕ್ಷಣೆಗೆ ವೀರ ರಸ, ಭೀಬತ್ಸ ರಸಗಳೇ ಪ್ರಧಾನವಲ್ಲ; ಶೃಂಗಾರರಸದ ಮೂಲಕವೂ ಧರ್ಮರಕ್ಷಣೆ ಮಾಡಬಹುದು ಎಂಬ ತತ್ವವನ್ನು ಜಗನ್ಮಾತೆ ತ್ರಿಪುರಸುಂದರಿ ಲೋಕಕ್ಕೆ ದರ್ಶನ ಮಾಡಿಸಿಕೊಟ್ಟಿದ್ದಾಳೆ. ಜಗನ್ಮಾತೆ ಜಗನ್ಮೋಹಿನಿ ರೂಪದಿಂದ ದುಷ್ಟ ಶಕ್ತಿಗಳ ಸಂಹಾರ ಮಾಡಿ ಧರ್ಮರಕ್ಷಣೆ ಮಾಡಿದ ಅದ್ಭುತ ಕಥಾನಕ ಶ್ರೀ ಲಲಿತೋಪಾಖ್ಯಾನ ಎಂದು ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

ಮಾಣಿ ಪೆರಾಜೆಯ ಶ್ರೀರಾಮಚಂದ್ರಾಪುರ ಮಠದಲ್ಲಿ ನವರಾತ್ರ ನಮಸ್ಯಾ ಅಂಗವಾಗಿ ‘ಶ್ರೀ ಲಲಿತೋಪಾಖ್ಯಾನ’ ಪ್ರವಚನ ಮಾಲಿಕೆಯ ಎರಡನೇ ದಿನದ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು. ದೇವಿಯ ಮೊದಲ ರೂಪ ಪ್ರಕೃತಿಯಾದರೆ, ಎರಡನೇ ರೂಪ ವಿಷ್ಣುವಿನ ಮೂಲಕ ಐಕ್ಯಮತ್ಯ ಸಾಧಿಸಿದ ಮೋಹಿನಿ ಎರಡನೇ ರೂಪ ಎಂಬ ಉಲ್ಲೇಖ ಲಲಿತೋಪಾಖ್ಯಾನದಲ್ಲಿದೆ. ಪರಮ ವೈರಾಗ್ಯ ಮೂರ್ತಿಯಾದ ಸಾಕ್ಷಾತ್ ಶಿವ ಕೂಡಾ ಮೋಹಿನಿ ರೂಪಕ್ಕೆ ಮಾರುಹೋಗುತ್ತಾನೆ. ಹರಿ-ಹರ ತತ್ವಗಳ ದಿವ್ಯ, ಅಲೌಕಿಕ ಸಂಯೋಗದಿಂದ ಮಹಾಶಕ್ತಿ ಮಹಾಶಾಸ್ತನ ಆವೀರ್ಭಾವವಾಯಿತು ಎಂದು ಬಣ್ಣಿಸಿದರು.

ಮೋಹ ಎನ್ನುವುದು ನಮ್ಮೊಳಗಿನ ಶತ್ರು. ರಾವಣನ ಸಾವಿಗೆ ರಾಮ ನಿಮಿತ್ತ ಮಾತ್ರ; ಆತನನ್ನು ನಿಜವಾಗಿ ಸಾಯಿಸಿರುವುದು ಆತನ ಮೋಹ. ಆದರೆ ಮೋಹಿನಿ ವಾಸ್ತವವಾಗಿ ಮಾತೆಯ ಸ್ವರೂಪ. ಅದನ್ನು ಕೆಟ್ಟದ್ದು ಎನ್ನಲಾಗದು. ದೇವಸೃಷ್ಟಿಯಲ್ಲಿ ಕೆಟ್ಟದ್ದು ಇರಲು ಸಾಧ್ಯವೇ ಇಲ್ಲ. ವಾಸ್ತವವಾಗಿ ಕೆಟ್ಟದ್ದು ಇರುವುದು ನಮ್ಮ ಮನಸ್ಸಿನಲ್ಲಿ ಎಂದು ಪ್ರತಿಪಾದಿಸಿದರು. ಮೋಹ ಎನ್ನುವುದು ನಮ್ಮನ್ನು ಪರಸ್ಪರ ಬಂಧಿಸಿದೆ. ಇದಕ್ಕೂ ಜೀವನದಲ್ಲಿ ಒಂದು ಪ್ರಮುಖ ಪಾತ್ರ ಇದೆ. ಮೋಹವನ್ನು ಸರ್ವಥಾ ತ್ಯಾಜ್ಯ ಎನ್ನಲು ಸಾಧ್ಯವಿಲ್ಲ. ದೇವ-ದಾನವರಂಥ ಬದ್ಧ ವೈರಿಗಳು ಕೂಡಾ ಸಮುದ್ರ ಮಥನಕ್ಕೆ ಒಂದಾಗುವಂತೆ ಶ್ರೀಮನ್ನಾರಾಯಣ ಮಾಡಿರುವುದು ಈ ಮೋಹದಿಂದ ಎಂಬ ಉದಾಹರಣೆ ನೀಡಿದರು.

300x250 AD

ಉಂಡೆಮನೆ ವಿಶ್ವೇಶ್ವರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಮಠದ ವಿತ್ತಾಧಿಕಾರಿ ಜೆ.ಎಲ್.ಗಣೇಶ್, ಮಾಣಿಮಠ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಮಂಗಳೂರಿನ ಉದ್ಯಮಿ ನೆಡ್ಲೆ ರಾಮ ಭಟ್ ದಂಪತಿ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಮಿತ್ತೂರು, ವಿದ್ಯಾರ್ಥಿ ಪ್ರಧಾನರಾದ ಈಶ್ವರ ಪ್ರಸಾದ್ ಕನ್ಯಾನ, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಮಾತೃವಿಭಾಗದ ಪ್ರಮುಖರಾದ ವೀಣಾ ಗೋಪಾಲಕೃಷ್ಣ ಪುಳು, ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ ಮತ್ತಿತರರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top