Slide
Slide
Slide
previous arrow
next arrow

ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ,ಹಳ್ಳಿಗಳ ಪ್ರಗತಿಗೆ ಶ್ರಮಿಸಲು ಶಾಸಕ ಭೀಮಣ್ಣ ಕರೆ

300x250 AD

ಶಿರಸಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎದುರು ಸಾಕಷ್ಟು ಸವಾಲುಗಳಿದ್ದು, ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ, ಹಳ್ಳಿಗಳ ಪ್ರಗತಿಗೆ ಶ್ರಮಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ತಾಲೂಕಿನ ಕುಳವೆ ಗ್ರಾ.ಪಂನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತದಿ0ದ ಹಮ್ಮಿಕೊಂಡ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾಮಗಾರಿ ಆದೇಶಪತ್ರ ವಿತರಿಸಿ, ಮಾತನಾಡಿದರು.

ನಮ್ಮ ದೇಶಕ್ಕೆ ಸ್ವಾತಂತ್ರ‍್ಯ ಲಭಿಸಿ, 76 ವರ್ಷ ಕಳೆದಿದೆ. ಆದರೆ ಇನ್ನೂ ಕೆಲ ಗ್ರಾಮೀಣ ಪ್ರದೇಶಗಳು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಈ ಹಿನ್ನೆಲೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮೀಣ ಭಾಗಕ್ಕೆ ಆರ್ಥಿಕ ಶಕ್ತಿ ನೀಡುತ್ತಿದೆ. ಜನರು ಯಾವ ಉದ್ಧೇಶಕ್ಕೆ ನಮ್ಮನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಜನಪ್ರತಿನಿಧಿಗಳು ಅರ್ಥೈಸಿಕೊಳ್ಳಬೇಕು ಎಂದ ಅವರು, ಅಭಿವೃದ್ಧಿ ಎನ್ನುವುದು ನಿರಂತರ ಪ್ರಕ್ತಿಯೆ. ಬದಲಾದ ಸರ್ಕಾರದಲ್ಲಿ ಹಿಂದಿನ ಸರ್ಕಾರ ಮಂಜೂರಿ ಮಾಡಿದ ಕಾಮಗಾರಿಗಳನ್ನು ಸ್ಥಗಿತಗೊಳಿಸುವುದಿಲ್ಲ. ಹಿಂದಿನ ಸರ್ಕಾರ, ಹಿಂದಿನ ಶಾಸಕರು ಮಂಜೂರಿ ಮಾಡಿಸಿದ ಕಾಮಗಾರಿಗಳನ್ನು ರದ್ಧುಗೊಳಿಸಲಾಗುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ. ಶಾಸಕರು ಬದಲಾದರೂ ಕಾಮಗಾರಿಗಳು ನಿರಂತರವಾಗಿ ನಡೆಯುತ್ತದೆ ಎಂದರು.

ಅಧಿಕಾರಕ್ಕೆ ಹೇಗೆ ಆತುರಪಡುತ್ತೇವೆಯೋ ಹಾಗೆಯೇ ಅಭಿವೃದ್ಧಿ ಕುರಿತು ತುಡಿತಹೊಂದಿರಬೇಕು. ಜನರು ಯಾವ ಉದ್ದೇಶಕ್ಕೆ ನಮಗೆ ಅಧಿಕಾರಿ ನೀಡಿದ್ದಾರೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಕ್ಷೇತ್ರದ ಶಾಸಕನಾಗಿ ಮಾಡುತ್ತೇನೆ. ಉತ್ತರಕನ್ನಡ ಜಿಲ್ಲೆಯು ಭೌಗೋಳಿಕವಾಗಿ ವಿಶಾಲ ವ್ಯಾಪ್ತಿಯನ್ನು ಹೊಂದಿದ್ದು, ಶೇ.82 ರಷ್ಟು ಅರಣ್ಯಭೂಮಿಯನ್ನು ಹೊಂದಿದೆ. ಸಾಕಷ್ಟು ಬಡವರು ಅರಣ್ಯ ಭೂಮಿ ಅತಿಕ್ರಮಣ ಮಾಡಿಕೊಂಡು ನೆಮ್ಮದಿ ಜೀವನ ನಡೆಸುತ್ತಿದ್ದು, ಅವರಿಗೆ ಹಕ್ಕು ಪತ್ರ ನೀಡಲು ವಿಧಾನಸಭಾ ಅಧಿವೇಶನದಲ್ಲಿ ಒತ್ತಾಯಿಸಿದ್ದೇನೆ. ಬೆಟ್ಟ ಭೂಮಿಯನ್ನು ಸಾರ್ವಜನಿಕಗೊಳಿಸುವುದನ್ನು ವಿರೋಧಿಸಿ, ನಮ್ಮ ಜಿಲ್ಲೆಯಲ್ಲಿ ಹೋರಾಟ ನಡೆಯುತ್ತಿದೆ. ಇದನ್ನು ರೈತರಿಗೆ ನೀಡಬೇಕು. ಅಲ್ಲದೇ ರೈತರಿಗೆ ಸಿಗುವ ಪಾಲು ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಲಾಗಿದೆ ಎಂದರು.

300x250 AD

ಹಳದಿ ರೋಗ, ಎಲೆಚುಕ್ಕೆ ರೋಗವು ಅಡಿಕೆ ಬೆಳೆಗಾರರಿಗೆ ಮಾರಕವಾಗಿದೆ. ಸರ್ಕಾರದಿಂದ ತೋಟಗಾರಿಕಾ ಇಲಾಖೆ ಮೂಲಕ ಉಚಿತವಾಗಿ ಜೌಷಧಿ ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ತೋಟಗಾರಿಕಾ ಇಲಾಖೆ ಸಚಿವರನ್ನು ಭೇಟಿ ಮಾಡಿ ಸೂಕ್ತ ಪರಿಹಾರ ಒದಗಿಸುವಂತೆ ವಿನಂತಿಸಲಾಗಿದ್ದು, ರೋಗ ತಡೆಗಟ್ಟುವ ಬಗ್ಗೆ ತಜ್ಞರ ಜತೆ ಸಭೆ ನಡೆಸಿ, ತಳಮಟ್ಟದ ಅಧ್ಯಯನ ನಡೆಸಲು ಕಾರ್ಯಪ್ರವೃತ್ತರಾಗಲು ಕೋರಲಾಗಿದೆ ಎಂದರು.

ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, ಅಧಿಕಾರ ಸಿಕ್ಕ ನಂತರ ಕೆಲವರ ವರ್ತನೆಯಲ್ಲಿ ಬದಲಾಗುವುದು ಸಹಜ. ಆದರೆ ಶಾಸಕ ಭೀಮಣ್ಣ ನಾಯ್ಕ ಸಾರ್ವಜನಿಕರ ಸಣ್ಣ ಸಣ್ಣ ಸಮಸ್ಯೆಗೂ ಸ್ಪಂದಿಸುತ್ತಿದ್ದಾರೆ. ಅತಿಕ್ರಮಣ ಭೂಮಿಯಲ್ಲಿ ವಾಸಿಸುತ್ತಿರುವವರಿಗೆ ತೊಂದರೆ ನೀಡಬಾರದೆಂದು ಅತಿಕ್ರಮಣದಾರರ ಪರವಾಗಿ ವಿಧಾನಸೌಧದಲ್ಲಿ ದ್ವನಿ ಎತ್ತಿದ್ದಾರೆ. ಅಭಿವೃದ್ಧಿ ವಿಷಯದಲ್ಲಿ ರಾಜಿಯಾಗದೇ, ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದಾರೆ. ಅವರ ಪ್ರಯತ್ನದ ಫಲವಾಗಿ ಕುಳವೆ ಗ್ರಾ.ಪಂ ವ್ಯಾಪ್ತಿಯಲ್ಲಿ ವಸತಿ ರಹಿತ 83 ಫಲಾನುಭವಿಗಳಿಗೆ ಮನೆ ಮಂಜೂರಿ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಗ್ರಾ.ಪಂ ಅಧ್ಯಕ್ಷೆ ರಂಜಿತಾ ಹೆಗಡೆ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಸದಸ್ಯರಾದ ಗಂಗಾಧರ ನಾಯ್ಕ, ವಿನಯ ಭಟ್ಟ, ಜ್ಯೋತಿ ನಾಯ್ಕ, ಜಾಹ್ನವಿ ಹಸ್ಲರ್, ದೇವಿ ಹರಿಜನ ಸೇರಿದಂತೆ ಮತ್ತಿತರರು ಇದ್ದರು.

Share This
300x250 AD
300x250 AD
300x250 AD
Back to top