ಶಿರಸಿ: ಇತ್ತೀಚಿಗೆ ಕರ್ನಾಟಕ ಸರಕಾರದ ಅರಣ್ಯ ಸಚಿವರು ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಸಂಬಂಧಿಸಿ ಹೊರಡಿಸಿದ ಟಿಪ್ಪಣೆಗೆ ಆಕ್ಷೇಪ ವ್ಯಕ್ತಪಡಿಸಿ, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿ ವಿಲೇ ಆಗುವವರೆಗೂ, ಅರ್ಜಿ ಸಲ್ಲಿಸಿದಂತಹ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಪ್ರಕ್ರೀಯೆ ಸ್ಥಗಿತಗೊಳಿಸಬೇಕೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅರಣ್ಯ ಸಚಿವರಿಗೆ ಆಗ್ರಹಿಸಿದ್ದಾರೆ.
ಅವರು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನ ಬೆಂಗಳೂರಿನ ವಿಕಾಸಸೌಧದ ಸಚಿವರ ಕಚೇರಿಯಲ್ಲಿ ಭೇಟಿಯಾಗಿ, ಸೆಪ್ಟೆಂಬರ್ 22 ರಂದು ಸಚಿವರು ಪ್ರಕಟಿಸಿದ ಟಿಪ್ಪಣೆಗೆ, ಕಾನೂನಿನ ದಾಖಲೆಗಳ ಸಹಿತ ಆಕ್ಷೇಪಿಸಿ ಮನವಿ ನೀಡಿ ಮಾತನಾಡಿದರು.
ರಾಜ್ಯಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದಂತಹ ಅರ್ಜಿ ಜಿಲ್ಲಾ ಮತ್ತು ಉಪವಿಭಾಗ ಅರಣ್ಯ ಹಕ್ಕು ಸಮಿತಿಯ ಅಸ್ತಿತ್ವವಿಲ್ಲದಿರುವದರಿಂದ ಅರಣ್ಯವಾಸಿಗಳ ಮಂಜೂರಿ ಪ್ರಕ್ರಿಯೆಯ ಅರ್ಜಿ ಸ್ಥಗಿತಗೊಂಡಿರುವುದರಿಂದ, ಸಚಿವರ ಟಿಪ್ಪಣೆಯು ರಾಜ್ಯಾದ್ಯಂತ ಟೀಕೆಗೆ ಮತ್ತು ಅರಣ್ಯವಾಸಿಗಳಲ್ಲಿ ಗೊಂದಲ ಉಂಟಾಗಿರುವುದರಿಂದ ಟಿಪ್ಪಣೆಗೆ ಸ್ಪಷ್ಟೀಕರಣ ಅವಶ್ಯವೆಂದು ಅವರು ಪ್ರತಿಪಾದಿಸಿದರು.
ಕಾನೂನಿನಲ್ಲಿ ಅವಕಾಶವಿಲ್ಲ:
ಅರಣ್ಯ ಹಕ್ಕು ಕಾಯಿದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಅರ್ಜಿ ವಿಲೇವಾಗುವವವರೆಗೂ, ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಪ್ರಕ್ರೀಯೆಯಲ್ಲಿ ಒಳಪಡಿಸಲು ಕಾಯಿದೆಯಲ್ಲಿ ಅವಕಾಶವಿಲ್ಲವೆಂದು, ಕಾನೂನಿನ ಉಲ್ಲೇಖವನ್ನ ರವೀಂದ್ರ ನಾಯ್ಕ ಅವರು ಚರ್ಚೆಯ ಸಂದರ್ಭದಲ್ಲಿ ಸಚಿವರ ಗಮನಕ್ಕ ತಂದರು. ಚರ್ಚೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಉಪಸ್ಥಿತರಿದ್ದರು.