ಹಳಿಯಾಳ: ಸರಕಾರದ ಸುತ್ತೋಲೆಯಂತೆ ಹೆಚ್ ಎಂಡ್ ಟಿ ದರವನ್ನು ಆಕರಣೆ ಮಾಡಲು ಕ್ರಮ ವಹಿಸಿ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವಂತೆ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ರೈತ ಮುಖಂಡರುಗಳು ಮತ್ತು ರೈತರಿಂದ ಒಕ್ಕೊರಲ ಆಗ್ರಹ ಕೇಳಿಬಂತು.
ಈ ವೇಳೆ ಮಾತನಾಡಿದ ಹಿರಿಯ ರೈತ ಮುಖಂಡ ನಾಗೇಂದ್ರ ಜಿವೋಜಿ, ಈವರೆಗೆ ನಡೆದ ರಾಜ್ಯ ಕಬ್ಬು ಬೆಳೆಗಾರರ ಸಂಘದ ಹೋರಾಟ ಮತ್ತು ಆಶ್ವಾಸನೆಗಳೆಲ್ಲ ಕೇವಲ ಕಣ್ಣೊರೆಸುವ ಸರ್ಕಾರದ ತಂತ್ರಗಳಾಗಿವೆ. ಎಷ್ಟೇ ಶಾಂತಿಯುತ ಹೋರಾಟ ಮಾಡಿದರೂ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆ ಶೋಷಣೆ ಮತ್ತು ಮೋಸಗಳಿಗೆ ಬಡ ರೈತ ಮಾತ್ರ ಬಲಿಯಾಗುತ್ತಿದ್ದು, ಸಂಯಮದ ಕಟ್ಟೆ ಒಡೆಯುವುದೊಂದೆ ಬಾಕಿ ಉಳಿದಿದೆ ಎಂದರು.
ಕಳೆದ ಸಾಲಿನಲ್ಲಿ ಹೆಚ್ಚುವರಿ ಯಾಗಿ ನೀಡಬೇಕಾದ ರೂ.150 ಪ್ರತಿ ಟನ್‌ನ ಬಾಕಿ ಹಣವನ್ನು ರೈತರ ಖಾತೆಗೆ ಜಮಾ ಮಾಡಬೇಕಿದೆ. 2022ರ ನ.08ರಂದು ಜಿಲ್ಲಾಧಿಕಾರಿಯವರ ಸಭಾಭವನದಲ್ಲಿ ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ನಡೆಸಿದ ಸಭೆಯಲ್ಲಿ ನಿರ್ಣಯಿಸಿದಂತೆ 2017ರಿಂದ ಇವತ್ತಿನವರೆಗೆ ಹೆಚ್ ಎಂಡ್ ಟಿ ದರದ ಕುರಿತು ಅಡಿಟ್ ಮಾಡಿ ಹೆಚ್ಚುವರಿ ಹಣವನ್ನು ರೈತರ ಖಾತೆಗೆ ಜಮೆ ಮಾಡಿಸುವ ಭರವಸೆ ಭರವಸೆಯಾಗಿಯೇ ಇದ್ದು, ಇದನ್ನು ಇತ್ಯರ್ಥಪಡಿಸಬೇಕಿದೆ. ತೂಕದಲ್ಲಿ ಆಗುತ್ತಿದ್ದ ಮೋಸವನ್ನು ತಡೆಯಲು ಆವರಣದ ಹೊರಗೆ ತೂಕದ ಯಂತ್ರವನ್ನು ಎಲ್ಲ ರೈತರಿಗೂ ಕಾಣುವಂತೆ ಅಳವಡಿಸಲು ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಪ್ರತಿದಿನ ನುರಿಸಿದ ಕಬ್ಬಿನ ವಿವರ ಮತ್ತು ಮಾಹಿತಿ ಸಂಘದ ಪದಾಧಿಕಾರಿಗಳಿಗೆ ಮತ್ತು ಆಯಾ ರೈತರಿಗೆ ನೀಡುವ ನಿರ್ಣಯವನ್ನು ಇದುವರೆಗೂ ಪಾಲನೆಯಾಗುತ್ತಿಲ್ಲ. ನಿಗದಿಯಾದ ಎಫ್‌ಆರ್‌ಪಿ ದರದೊಂದಿಗೆ ಹೆಚ್ ಎಂಡ್ ಟಿ ದರ ಮತ್ತು ಉಳಿದಿರುವ ಬಾಕಿ ಹಣದ ಸಂದಾಯವಾಗಿ ರೈತರಿಂದ ದ್ವಿಪಕ್ಷೀಯ ಒಪ್ಪಂದ ಮಾಡಿಕೊಂಡು 2023-24ನೇ ಸಾಲಿನ ಕಬ್ಬು ನುರಿಸಲು ನವೆಂಬರ್ ತಿಂಗಳಿನಿಂದ ಕಾರ್ಖಾನೆ ಶುರು ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕುಮಾರ ಬೊಬಾಟಿ, ಶಂಕರ ಕಾಜಗಾರ, ಅಶೋಕ ಮೇಟಿ, ಪರಶುರಾಮ ಯತ್ತಿನಗುಡ್ಡ, ಎಮ್.ವಿ.ಘಾಡಿ, ರಾಮದಾಸ ಬೆಳಗಾಂವಕರ, ಸಾತೊರಿ ಗೋಡಿಮನಿ, ಭರತ ಪಾಟೀಲ ನಿಜಗುಣಿ ಕಲಕೇರಿ ಮತ್ತಿತರ ರೈತ ಮುಖಂಡರುಗಳು ಹಾಜರಿದ್ದರು.