ಯಲ್ಲಾಪುರ: ನೃತ್ಯ, ಸಂಗೀತ, ಸಾಂಸ್ಕೃತಿಕ ಕಲೆಗಳಷ್ಟೇ ಭಾರತೀಯತೆ ಅಲ್ಲ. ಸಮಗ್ರ ರಾಷ್ಟ್ರದ ಕುರಿತು ಚಿಂತನೆ ಹಾಗೂ ಬೌಗೋಳಿಕ ಪ್ರಜ್ಞೆ ಇವುಗಳ ಜೊತೆಗೆ ಅಳವಡಿಕೆಯಾಗಿದ್ದರೆ ಅದು ನಿಜವಾದ ಭಾರತೀಯತೆ ಎಂದು ಖ್ಯಾತ ಅಂಕಣಕಾರರು, ಕೃತಿಕಾರರು, ಮಾಜಿ ವಿಧಾನ ಪರಿಷತ್ ಸದಸ್ಯರೂ ಆದ ಡಾ.ಎಸ್.ಆರ್.ನೀಲಾ ಹೇಳಿದರು.
ಇತ್ತೀಚೆಗೆ ಅವರು ತಾಲೂಕಿನ ಉಮ್ಮಚಗಿ ಕಾಗಾರುಕೊಡ್ಲಿನ ಸುಮೇರು ಜ್ಯೋತಿರ್ವನದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ‘ಭಾರತೀಯತೆ’ ವಿಷಯದ ಕುರಿತು ಉಪನ್ಯಾಸ ನೀಡುತ್ತಿದ್ದರು. ನಮ್ಮ ವಿದ್ಯಾರ್ಥಿಗಳಿಗೆ ದೇಶದ ಕುರಿತಾದ ಐತಿಹಾಸಿಕ ಪ್ರಜ್ಞೆ, ಸಂಸ್ಕೃತ ಅಧ್ಯಯನ, ರಾಷ್ಟ್ರದ ಬಗೆಗಿನ ಸಂಪೂರ್ಣ ಮಾಹಿತಿಯೂ ಇದ್ದರೆ ಉತ್ತಮ, ಭಾರತೀಯತೆ ಇತ್ತೀಚಿಗೆ ಅಪ ಶೃತಿಗೊಳಪಟ್ಟಿದೆ. ಇದಕ್ಕೆ ಹಲವು ವೈಪರಿತ್ಯಗಳೇ ಕಾರವಾಗಿದೆ. ನಮ್ಮವರೆನಿಸಿದ ವ್ಯಕ್ತಿಗಳೇ ನಮ್ಮ ವಿನಾಶಕ್ಕೆ ಪ್ರಯತ್ನಿಸುತ್ತಿರುವುದು ವಿಪರ್ಯಾಸದ ಸಂಗತಿ ಎಂದು ಹೇಳಿದ ಅವರು, ಸುಮೇರು ಜ್ಯೋತಿರ್ವನಂ ಮಾಡುತ್ತಿರುವ ಉತ್ತಮ ಕಾರ್ಯಗಳಿಗೆ ಬೆಂಬಲವಾಗಿ ಲೀಲಾ ಅವರು 5 ಲಕ್ಷ ರೂ. ದೇಣಿಗೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಮಾತನಾಡಿ, ಪ್ರತಿಯೊಬ್ಬರೂ ತಾವು ತೊಡಗಿಕೊಂಡ ಕ್ಷೇತ್ರದಲ್ಲಿ ಸಾಧ್ಯವಿದ್ದಷ್ಟು ಪ್ರಮಾಣದ ಪರಿಣಾಮಕಾರಿ ಕಾರ್ಯ ಮಾಡಿದರೆ ಮಾತ್ರ ಅದು ಸಾರ್ಥಕತೆ ಪಡೆಯಲು ಸಾಧ್ಯ. ಭಾರತೀಯ ಸನಾತನ ಪರಂಪರೆ ಯಾವ ಕಾರಣಕ್ಕೂ ಅಳಿಯದಂತೆ, ಉಳಿದು ಬೆಳೆಸುವ ಕಾರ್ಯವನ್ನು ನಾವೆಲ್ಲರೂ ಮಾಡಬೇಕು ಎಂದರು.
ತಮ್ಮ ಮನೆಯಲ್ಲಿ ದೊರಕಿದ ತಾಳೆಗರಿಯ ರಾಮಾಯಣದ ಪ್ರತಿಯನ್ನು ತಿಮ್ಮಪ್ಪ ಎಂ. ಹೆಗಡೆ ಶೀಗೆಮನೆ ಮತ್ತು ವಿಮಲಾ ಹೆಗಡೆ ದಂಪತಿಗಳು ಜ್ಯೋತಿರ್ವನಂ ಗ್ರಂಥಾಲಯಕ್ಕೆ ಹಸ್ತಾಂತರ ಮಾಡಿದರು. ಉಮ್ಮಚಗಿಯ ಸಂಸ್ಕೃತ ಕಾಲೇಜಿನ ವಿದ್ಯಾರ್ಥಿ ನರೇಂದ್ರ ಜೋಶಿ ಈರ್ಕೊಪ್ಪ ಅಪರೂಪದ ಪ್ರಾಚೀನ ಗ್ರಂಥಗಳನ್ನು ಪಿಡಿಎಫ್ ಫೈಲ್ ಗಳನ್ನು ಗ್ರಂಥಾಲಯಕ್ಕೆ ನೀಡಿದರು. ಕಾರ್ಯಕ್ರಮದ ಸಂಘಟಕರಾದ ಶ್ರೀಮಾತಾ ಸಂಸ್ಕೃತ ಮಹಾವಿದ್ಯಾಲಯದ ಪ್ರಾಧ್ಯಾಪಕ ಕೆ ಸಿ ನಾಗೇಶ ಈ ಸಂದರ್ಭದಲ್ಲಿದ್ದರು.
ಸುಮಂಗಲಾ ಹೆಗಡೆ ಮಂಡೆಮನೆ ಪ್ರಾರ್ಥಿಸಿದರು. ಪುಷ್ಕರಂ ಸಂಸ್ಥೆಯ ಡಾ.ನಿವೇದಿತಾ ಭಟ್ಟ ಸ್ವಾಗತಿಸಿದರು. ಶ್ರೀಮಾತಾ ಸಂಸ್ಕೃತ ಪಾಠಶಾಲೆಯ ಅಧ್ಯಾಪಕ ವಿದ್ವಾನ್ ಡಾ.ಮಹೇಶ ಭಟ್ಟ, ಹುಲೇಕಲ್ ಶ್ರೀದೇವಿ ಪ. ಪೂ. ಕಾಲೇಜು ಪ್ರಾಚಾರ್ಯ ಡಿ. ಆರ್. ಹೆಗಡೆ ನಿರ್ವಹಿಸಿದರು. ಮಹಾ ಪಾಠಶಾಲೆಯ ಅಧ್ಯಾಪಕ ವಿ.ನರಹರಿ ಭಟ್ಟ ವಂದಿಸಿದರು.
ಭಾರತೀಯತೆಯ ಗರಿಮೆ ಎಂಬ ಕುರಿತು ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಟಿ. ಎಮ್.ಜಗದೀಶ ಕುಪ್ಪಳ್ಳಿ, ಜಿ.ಎಸ್.ಜಯಪ್ರಕಾಶ ತಲವಾಟ ಹಾಗೂ ಪ್ರೋತ್ಸಾಹಕ ಸ್ಥಾನ ಪಡೆದ ಪ್ರದೀಪ ಹೆಗಡೆ ಕೈಗಾ, ಭಾರತಿ ಹೆಗಡೆ ಉಮ್ಮಚಗಿ, ವನಿತಾ ಹೆಗಡೆ ಸಿರಸಿ, ಮೇದಿನಿ ಪತ್ರೇಕರ್ ಹಿತ್ಲಳ್ಳಿ ಇವರಿಗೆ ವೇದಿಕೆಯಲ್ಲಿದ್ದ ಗಣ್ಯರು ಬಹುಮಾನ ಪ್ರದಾನ ಮಾಡಿದರು.